Avoid These Foods During Summer: ಬೇಸಿಗೆಯ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಬಿಸಿಲು ಹೆಚ್ಚಾಗಿರುವ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕಾಗುತ್ತದೆ.

Avoid These Foods During Summer: ರಾಜ್ಯದಲ್ಲಿ ಬೇಸಿಗೆಯ ಆರಂಭದಲ್ಲೇ ಬಿಸಿಲಿನ ಅಬ್ಬರ ಜೋರಾಗಿದೆ. ಋತುಮಾನ ಬದಲಾದರೆ ಸಾಮಾನ್ಯವಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಿರುಬಿಸಿಲಿನ ಹಿನ್ನೆಲೆಯಲ್ಲಿ ಮೈಯೆಲ್ಲಾ ಬೆವರುವುದು ಹಾಗೂ ಅತಿಯಾದ ಬಾಯಾರಿಕೆ ಆಗುತ್ತದೆ. ಈ ಸಮಯದಲ್ಲಿ ದೇಹದ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು. ವಾತಾವರಣಕ್ಕೆ ಅನುಗುಣವಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ನಿಮ್ಮ ದೈನಂದಿನ ಉಪಹಾರ ಮತ್ತು ಊಟದ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಮತ್ತೆ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರದ ಕುರಿತಂತೆ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಈ ಆಹಾರಗಳು ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ಉಂಟುಮಾಡುತ್ತದೆ. ಪ್ರಮುಖವಾಗಿ ಜಂಕ್‌ಫುಡ್ ಅನ್ನು ಕಡಿಮೆ ಸೇವಿಸುವುದು ಒಳ್ಳೆಯದು. ಉತ್ತಮ ಆಹಾರ ಕ್ರಮ ಅನುಸರಿಸುವ ಮೂಲಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಬೇಸಿಗೆಯಲ್ಲಿ ಯಾವ ಆಹಾರಗಳನ್ನು ಸೇವಿಸದಿದ್ದರೆ ಉತ್ತಮ ಎಂಬುದರ ಬಗ್ಗೆ ತಿಳಿಯೋಣ.
ಬೇಸಿಗೆಯಲ್ಲಿ ಸೇವಿಸಬಾರದ ಆಹಾರಗಳಿವು:

ಕಾಫಿ: ಬೇಸಿಗೆಯಲ್ಲಿ ಹೆಚ್ಚು ಕಾಫಿ ಸೇವನೆ ಮಾಡುವುದರಿಂದ ದೇಹವು ನಿರ್ಜಲೀಕರಣವಾಗುತ್ತದೆ. ಕಾಫಿಯು ಮೂತ್ರವರ್ಧಕವಾಗಿರುವುದರಿಂದ ಇದನ್ನು ಕುಡಿಯುವುದನ್ನು ತಪ್ಪಿಸಬೇಕು. ಕಾಫಿ ತಪ್ಪಿಸದಿದ್ದರೆ, ದೇಹದ ಉಷ್ಣತೆಯನ್ನು ಹೆಚ್ಚಾಗುತ್ತದೆ ಮತ್ತು ಅಧಿಕ ಬೆವರುವಿಕೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಮಸಾಲೆಯುಕ್ತ ಆಹಾರ: ಬಿಸಿ ವಾತಾವರಣದಲ್ಲಿ ಮಸಾಲೆಯುಕ್ತ ಆಹಾರಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಆಹಾರಗಳನ್ನು ಸೇವಿಸುವುದರಿಂದ ಅಜೀರ್ಣ ಹಾಗೂ ಎದೆಯುರಿಗೆ ಮತ್ತು ಅತಿಯಾದ ಬೆವರುವಿಕೆಗೆ ಕೂಡ ಕಾರಣವಾಗುತ್ತವೆ. ಬೇಸಿಗೆಯಲ್ಲಿ ಮಸಾಲೆಯುಕ್ತ ತಿಂಡಿಗಳನ್ನು ತಿನ್ನುವುದು ಅಷ್ಟೊಂದು ಒಳ್ಳೆಯದಲ್ಲ. ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವ ಬದಲಾಗಿ ಆರೋಗ್ಯಕರವಾದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಜ್ಞರು ತಿಳಿಸುತ್ತಾರೆ.

ಎಣ್ಣೆಯುಕ್ತ ಆಹಾರ: ಬೇಸಿಗೆಯಲ್ಲಿ ನೀವು ಎಣ್ಣೆಯುಕ್ತ ಆಹಾರ ತಿನ್ನುವುದನ್ನು ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳು, ಬರ್ಗರ್‌ಗಳು ಹಾಗೂ ಕ್ರೀಮಿ ಸಾಸ್‌ಗಳು, ಸಮೋಸ ಮತ್ತು ಫ್ರೆಂಚ್ ಫ್ರೈಯಂತಹ ಆಹಾರವನ್ನು ತಿನ್ನಬೇಡಿ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇವುಗಳನ್ನು ಸೇವಿಸುವುದರಿಂದ ನಿಮಗೆ ದೇಹವು ಭಾರವಾದಂತೆ ಅನಿಸುವುದು, ಅಜೀರ್ಣ ಸಮಸ್ಯೆಯ ಜೊತೆಗೆ ಸೋಮಾರಿತನವೂ ಉಂಟಾಗುತ್ತದೆ. ಹೀಗಾಗಿ ಬೇಯಿಸಿದ ತರಕಾರಿಗಳು, ಸಲಾಡ್‌ಗಳು ಹಾಗೂ ಕಡಿಮೆ ಕೊಬ್ಬಿನ ಪ್ರೋಟೀನ್‌ಗಳಂತಹ ಲಘು ಆಹಾರ ಸೇವಿಸುವುದು ಒಳ್ಳೆಯದು.

ಮದ್ಯ: ಬೇಸಿಗೆಯಲ್ಲಿ ಸೂರ್ಯನ ಬಿಸಿಲು ಏರುತ್ತಿದ್ದಂತೆ ಕೆಲವು ಜನರು ತಣ್ಣನೆಯ ಬಿಯರ್ ಹಾಗೂ ಕಾಕ್ಟೇಲ್‌ಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಿದರೆ, ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹದ ಉಷ್ಣತೆ ಹೆಚ್ಚಳಕ್ಕೂ ಕಾರಣವಾಗುತ್ತದೆ. ನಿಮ್ಮದ ದೇಹವು ಶಾಖದಿಂದ ಬಳಲುತ್ತದೆ. ತಾಪಮಾನ ಹೆಚ್ಚಿರುವಾಗ ದೇಹವು ತೀವ್ರ ತೊಂದರೆ ಅನುಭವಿಸುತ್ತದೆ. ಹೆಚ್ಚಿನ ತಾಪಮಾನದಲ್ಲಿ ಆಲ್ಕೋಹಾಲ್ ಸೇವನೆ ಕಡಿಮೆ ಮಾಡುವುದು ಉತ್ತಮ. ನೀವು ಉಲ್ಲಾಸದಿಂದಿರಲು ಆಗಾಗ್ಗೆ ನೀರು ಮತ್ತು ಹೈಡ್ರೇಟ್ ಆಗಿರುವಂತಹ ಪಾನೀಯಗಳನ್ನು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.
ಸಕ್ಕರೆ ಪಾನೀಯಗಳು: ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಅದರಲ್ಲೂ ಸೋಡಾ, ಎನರ್ಜಿ ಡ್ರಿಂಕ್ಸ್, ಸ್ಪೋರ್ಟ್ಸ್ ಡ್ರಿಂಕ್ಸ್ನಂತಹ ಸಕ್ಕರೆ ಪಾನೀಯಗಳನ್ನು ಅಧಿಕವಾಗಿ ಸೇವಿಸುತ್ತಾರೆ. ಇವುಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಆದ್ದರಿಂದ ಈ ಪಾನೀಯಗಳನ್ನು ತಪ್ಪಿಸಬೇಕು. ಇವುಗಳಿಂದ ದೇಹವು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆಯಾಗುತ್ತದೆ. ಈ ಪಾನೀಯಗಳ ಬದಲಾಗಿ ನೀರು, ಹರ್ಬಲ್ ಚಹಾಗಳು ಇಲ್ಲವೇ ಎಳೆನೀರನ್ನು ಕುಡಿಯಬೇಕು. ಇವುಗಳು ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತವೆ ಎನ್ನುತ್ತಾರೆ ವೈದ್ಯರು.
ಕೆಂಪು ಮಾಂಸ: ಕೆಂಪು ಮಾಂಸವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಭಾರವನ್ನು ಉಂಟುಮಾಡುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಬಿಸಿ ವಾತಾವರಣದಲ್ಲಿ ಕೆಂಪು ಮಾಂಸವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಹಾಗೂ ಆಲಸ್ಯಕ್ಕೂ ಕಾರಣವಾಗುತ್ತದೆ. ಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವ ಬದಲು ಅವುಗಳನ್ನು ಹಾಗೆ ತಿಂದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಡ್ರೈ ಫ್ರೂಟ್ಸ್: ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಾವು ಹೆಚ್ಚಾಗಿ ಬಾದಾಮಿ, ವಾಲ್ನಟ್, ಅಂಜೂರ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ತಿನ್ನುತ್ತೇವೆ. ಬೇಸಿಗೆಯಲ್ಲಿ ಇವುಗಳನ್ನು ಹಿತಮಿತವಾಗಿ ಸೇವಿಸುವುದು ಉತ್ತಮ. ಏಕೆಂದರೆ ಇವುಗಳನ್ನು ಹೆಚ್ಚು ಸೇವಿಸಿದರೆ, ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಡ್ರೈ ಫ್ರೂಟ್ಸ್ ಅನ್ನು ಸಣ್ಣ ಪ್ರಮಾಣದಲ್ಲಿ ತಿನ್ನಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಸಂಸ್ಕರಿಸಿದ ಆಹಾರಗಳು: ತಿನಿಸುಗಳನ್ನು ತಿನ್ನುವುದು ಯಾರಿಗಾದರೂ ಖುಷಿ ಲಭಿಸುತ್ತದೆ. ಆದ್ರೆ, ಬೇಸಿಗೆಯಲ್ಲಿ ನೀವು ಚಿಪ್ಸ್, ಕುಕೀಸ್ ಮತ್ತು ಕ್ಯಾಂಡಿ ಬಾರ್‌ಗಳಂತಹ ಸಂಸ್ಕರಿಸಿದ ಪ್ಯಾಕ್ ಮಾಡಿದ ಆಹಾರಗಳ ಸೇವಿಸುವುದನ್ನು ಕಡಿಮೆ ಮಾಡಬೇಕು. ಈ ತಿಂಡಿಗಳಲ್ಲಿ ಅನಾರೋಗ್ಯಕರ ಕೊಬ್ಬುಗಳು, ಸಕ್ಕರೆ ಅಧಿಕವಾಗಿರುತ್ತವೆ. ಇವು ಹೊಟ್ಟೆ ಉಬ್ಬರ ಹಾಗೂ ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇವುಗಳ ಬದಲಾಗಿ ತಾಜಾ ಹಣ್ಣುಗಳನ್ನು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳಿ.
ಬೇಸಿಗೆಯ ತಿಂಗಳುಗಳಲ್ಲಿ ನಾವು ಸೇವಿಸುವ ಆಹಾರವು ದೇಹದ ಆರೋಗ್ಯ, ಯೋಗಕ್ಷೇಮದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚಿನ ನೀರಿನ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ನಾವು ತಂಪಾಗಿರಲು ಸಾಧ್ಯವಾಗುತ್ತದೆ. ಅತಿಯಾದ ಮಸಾಲೆಯುಕ್ತ, ಎಣ್ಣೆಯುಕ್ತ ಆಹಾರಗಳು, ಸಕ್ಕರೆಯುಕ್ತ ಪಾನೀಯಗಳನ್ನು ತಪ್ಪಿಸುವುದರಿಂದ ಬೇಸಿಗೆಯ ಬಿಸಿಯಿಂದ ಆಗುವ ಅನಾನುಕೂಲತೆಯನ್ನು ತಡೆಯಲು ಸಹಾಯವಾಗುತ್ತದೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.