ಪ್ರವಾಸಿಗರಿಗೆ ಸಿಹಿಸುದ್ದಿ: ಅಧಿಕೃತ ಮಾರ್ಗದರ್ಶಿಗಳ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಪೋರ್ಟಲ್

ರಾಜ್ಯದ ಐತಿಹಾಸಿಕ ಹಾಗೂ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದೆ. ಪ್ರವಾಸಿಗರು ಅಧಿಕೃತ ಮತ್ತು ನುರಿತ ಮಾರ್ಗದರ್ಶಿಗಳನ್ನು (ಗೈಡ್‌) ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ‘ಮೀಟ್‌ ಯುವರ್ ಕರ್ನಾಟಕ ಗೈಡ್ಸ್’ ಎಂಬ ನೂತನ ಆನ್‌ಲೈನ್ ಪೋರ್ಟಲ್ ಅನ್ನು ಇಲಾಖೆ ರೂಪಿಸುತ್ತಿದೆ.

‘ಒಂದು ರಾಜ್ಯ, ಹಲವು ಜಗತ್ತು’ ಎಂಬ ರಾಜ್ಯ ಪ್ರವಾಸೋದ್ಯಮದ ಘೋಷವಾಕ್ಯಕ್ಕೆ ತಕ್ಕಂತೆ, ದೇಶ-ವಿದೇಶಗಳ ಪ್ರವಾಸಿಗರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ಈ ಪೋರ್ಟಲ್‌ನ ತಂತ್ರಾಂಶ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ನಿರೀಕ್ಷೆಯಿದೆ.

15 ಜಿಲ್ಲೆಗಳ ಗೈಡ್‌ಗಳ ವಿವರ ಲಭ್ಯ ಆರಂಭಿಕ ಹಂತದಲ್ಲಿ ರಾಜ್ಯದ ಪ್ರಮುಖ 15 ಜಿಲ್ಲೆಗಳ ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳ ಸಂಪೂರ್ಣ ವಿವರಗಳನ್ನು ಈ ಪೋರ್ಟಲ್‌ನಲ್ಲಿ ಅಳವಡಿಸಲಾಗುತ್ತಿದೆ. ಮೈಸೂರು, ವಿಜಯನಗರ (ಹಂಪಿ), ಚಿತ್ರದುರ್ಗ, ಬೆಂಗಳೂರು ನಗರ, ವಿಜಯಪುರ, ಕೋಲಾರ, ಶಿವಮೊಗ್ಗ, ಹಾಸನ, ಬಾಗಲಕೋಟೆ, ಚಾಮರಾಜನಗರ, ದಾವಣಗೆರೆ, ಕೊಪ್ಪಳ, ಕಲಬುರಗಿ, ಮಂಡ್ಯ ಹಾಗೂ ಉಡುಪಿ ಜಿಲ್ಲೆಗಳ ಗೈಡ್‌ಗಳ ಮಾಹಿತಿ ಜಿಲ್ಲಾವಾರು ಲಭ್ಯವಿರಲಿದೆ.

ಪೋರ್ಟಲ್‌ನ ಪ್ರಮುಖ ವೈಶಿಷ್ಟ್ಯಗಳು ಈ ವೆಬ್‌ಸೈಟ್‌ ಮೂಲಕ ಪ್ರವಾಸಿಗರು ತಾವು ಭೇಟಿ ನೀಡಲು ಇಚ್ಛಿಸುವ ಜಿಲ್ಲೆಯನ್ನು ಆಯ್ಕೆ ಮಾಡಿ, ಅಲ್ಲಿ ಲಭ್ಯವಿರುವ ಅಧಿಕೃತ ಗೈಡ್‌ಗಳ ಪಟ್ಟಿಯನ್ನು ವೀಕ್ಷಿಸಬಹುದು. ಇದರಲ್ಲಿ ಈ ಕೆಳಗಿನ ಮಾಹಿತಿಗಳು ಪಾರದರ್ಶಕವಾಗಿ ಸಿಗಲಿವೆ:

  • ಮಾರ್ಗದರ್ಶಿಯ ಹೆಸರು ಮತ್ತು ಭಾವಚಿತ್ರ.
  • ಇಲಾಖೆ ನೀಡಿರುವ ಪರವಾನಗಿಯ ಮಾನ್ಯತಾ ಅವಧಿ.
  • ಗೈಡ್‌ಗೆ ಸಂವಹನ ಮಾಡಲು ತಿಳಿದಿರುವ ಭಾಷೆಗಳು (ಇದು ವಿದೇಶಿ ಹಾಗೂ ಹೊರರಾಜ್ಯದ ಪ್ರವಾಸಿಗರಿಗೆ ಅತ್ಯಂತ ಉಪಯುಕ್ತ).
  • ಗೈಡ್‌ನ ವೃತ್ತಿ ಅನುಭವ ಮತ್ತು ಹಿನ್ನೆಲೆ.
  • ನೇರವಾಗಿ ಸಂಪರ್ಕಿಸಲು ಮೊಬೈಲ್ ಸಂಖ್ಯೆ.

ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಹಾವಳಿಗೆ ಮುಕ್ತಿ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಗೈಡ್‌ಗಳು ಹಾಗೂ ದಲ್ಲಾಳಿಗಳು ಪ್ರವಾಸಿಗರನ್ನು ದಿಕ್ಕುತಪ್ಪಿಸಿ ಹೆಚ್ಚಿನ ಹಣ ಸುಲಿಗೆ ಮಾಡುವ ಬಗ್ಗೆ ದೂರುಗಳು ಸಾಮಾನ್ಯವಾಗಿದೆ. ಹೊಸ ಪೋರ್ಟಲ್‌ನಿಂದಾಗಿ ಪ್ರವಾಸಿಗರು ನೇರವಾಗಿ ಇಲಾಖೆಯಿಂದ ಮಾನ್ಯತೆ ಪಡೆದ, ವಿಶ್ವಾಸಾರ್ಹ ಗೈಡ್‌ಗಳನ್ನು ಮಾತ್ರ ಸಂಪರ್ಕಿಸಲು ಸಾಧ್ಯವಾಗುತ್ತದೆ. ಮಧ್ಯವರ್ತಿಗಳ ಹಾವಳಿ ಸಂಪೂರ್ಣವಾಗಿ ತಪ್ಪುವುದರಿಂದ ಪ್ರವಾಸಿಗರಿಗೆ ಸುರಕ್ಷಿತ ಅನುಭವ ದೊರೆಯಲಿದ್ದು, ರಾಜ್ಯದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *