Gruha Lakshmi Scheme: ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮೈಸೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ ಯೋಜನೆ’ಯ ಉದ್ಘಾಟನಾ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಬದಲಾಯಿಸಲಾಗಿದೆ. ಆಗಸ್ಟ್ 27ರ ಬದಲು ಆ.30ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , ‘ಆ.30ರಂದು ‘ಗೃಹಲಕ್ಷ್ಮಿ ಯೋಜನೆ’ಗೆ ಚಾಲನೆ ನೀಡಲಿದ್ದು, ಅದೇ ದಿನ ಮಹಿಳೆಯರ ಖಾತೆಗೆ 2,000 ರೂ. ಜಮಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
1.09 ಕೋಟಿ ಮಹಿಳೆಯ ಖಾತೆಗೆ ‘ಗೃಹಲಕ್ಷ್ಮಿ’
‘ರಾಜ್ಯದ ಸುಮಾರು 1,09,54,000 ಮಹಿಳೆಯರ ಖಾತೆಗೆ ತಲಾ 2000 ರೂ. ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಸುಮಾರು 13,81,430ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 30ರಂದು ಮೈಸೂರಿನಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಒಂದು ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ನಿರ್ಮಾಣ ಕಾಮಗಾರಿಯನ್ನು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವೀಕ್ಷಿಸಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ‘ಗೃಹಲಕ್ಷ್ಮಿ ಯೋಜನೆ’ಯ ಉದ್ಘಾಟನಾ ಕಾರ್ಯಕ್ರಮವನ್ನು ಆ.30ರಂದು ಮೈಸೂರಿನಲ್ಲಿ ನಡೆಸಲಾಗುತ್ತಿದೆ.
ಏನಿದು ಗೃಹಲಕ್ಷ್ಮಿ ಯೋಜನೆ?
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳ ಪೈಕಿ ‘ಗೃಹಲಕ್ಷ್ಮಿ ಯೋಜನೆ’ಯು ಒಂದು. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಹೀಗಾಗಿ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ.