GST: ಅಕ್ಟೋಬರ್ 1ರಿಂದ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಶೇ.28ರಷ್ಟು ಜಿಎಸ್‌ಟಿ ಅನ್ವಯವಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.

ನವದೆಹಲಿ: ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ ತೆರಿಗೆ ವಿಧಿಸಲು ತಿದ್ದುಪಡಿ ಮಾಡಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನು ನಿಬಂಧನೆಗಳು ಅಕ್ಟೋಬರ್ 1ರಿಂದ ಅನುಷ್ಠಾನಕ್ಕೆ ಬರುವಂತೆ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಕೇಂದ್ರೀಯ ಜಿಎಸ್‌ಟಿ ಕಾಯ್ದೆ ಬದಲಾವಣೆಗಳ ಪ್ರಕಾರ, ಇ-ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳನ್ನು ಇನ್ಮುಂದೆ ಲಾಟರಿ, ಬೆಟ್ಟಿಂಗ್ ಮತ್ತು ಜೂಜಿನಂತೆಯೇ ಕ್ರಮಬದ್ಧ ಹಕ್ಕುಗಳು (actionable claims) ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಕಟ್ಟುವ ಬೆಟ್ಟಿಂಗ್ನ ಪೂರ್ಣ ಮುಖಬೆಲೆಯ ಮೇಲೆ ಶೇ.28ರಷ್ಟು ಜಿಟಿಎಸ್ ಅನ್ವಯವಾಗಲಿದೆ. ಅಲ್ಲದೇ, ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಕಾಯ್ದೆಯ ತಿದ್ದುಪಡಿಗಳು, ಕಡಲಾಚೆಯ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ನೋಂದಣಿಯನ್ನು ಮಾಡಿಕೊಳ್ಳುವುದು ಮತ್ತು ದೇಶೀಯ ಕಾನೂನಿಗೆ ಅನುಸಾರವಾಗಿ ತೆರಿಗೆಗಳನ್ನು ಪಾವತಿಸುವುದನ್ನು ಕಡ್ಡಾಯಗೊಳಿಸಿದೆ.
ಜುಲೈ ಮತ್ತು ಆಗಸ್ಟ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುವ ಜಿಎಸ್‌ಟಿ ಕೌನ್ಸಿಲ್ ಸಭೆಗಳಲ್ಲಿ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಹಾಗೂ ಕುದುರೆ ರೇಸಿಂಗ್‌ಗಳನ್ನು ತೆರಿಗೆ ವಿಧಿಸಬಹುದಾದ ಕ್ಲೈಮ್‌ಗಳಾಗಿ ಸೇರಿಸಲು ಕಾನೂನಿಗೆ ತಿದ್ದುಪಡಿ ತರಲು ಅನುಮೋದಿಸಲಾಗಿತ್ತು. ಜೊತೆಗೆ ಇಂತಹ ಬೆಟ್ ಮೌಲ್ಯದ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿತ್ತು.
ಜಿಎಸ್‌ಟಿ ಕೌನ್ಸಿಲ್ ನಿರ್ಧಾರವನ್ನು ಜಾರಿಗೆ ತರಲು ಕೇಂದ್ರ ಜಿಎಸ್‌ಟಿ ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ ಕಾನೂನುಗಳಿಗೆ ತಿದ್ದುಪಡಿಗಳಿಗೆ ಕಳೆದ ತಿಂಗಳಷ್ಟೇ ಸಂಸತ್ತು ಅಂಗೀಕರಿಸಿತ್ತು. ಇದೀಗ ಈ ನಿಬಂಧನೆಗಳು ಅಕ್ಟೋಬರ್ 1ರಂದು ಅನುಷ್ಠಾನಕ್ಕೆ ಬರಲಿವೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಆಗಸ್ಟ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲೇ ಅಕ್ಟೋಬರ್ 1ರಿಂದ ಜಾರಿಗೆ ತರುವ ಬಗ್ಗೆ ನಿರ್ಧರಿಸಲಾಗಿತ್ತು. ಇದರ ಅನುಷ್ಠಾನದ ಪರಿಶೀಲನೆಯನ್ನು ಆರು ತಿಂಗಳ ನಂತರ ಎಂದರೆ 2024ರ ಏಪ್ರಿಲ್ನಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಶೇ.28ರಷ್ಟು ಜಿಎಸ್‌ಟಿ ವಿಧಿಸುವ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆನ್‌ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಕ್ಯಾಸಿನೋಗಳ ಮೇಲೆ ಗರಿಷ್ಠ ತೆರಿಗೆ ವಿಧಿಸುವ ನಿರ್ಧಾರವು ಇದು ಉದ್ಯಮವನ್ನು ತುಳಿಯುವ ನಿರ್ಧಾರವಾಗಿರದೇ ಅದರ ನೈತಿಕತೆಯ ಮೇಲೆ ಉದ್ಭವಿಸಿದ ಪ್ರಶ್ನೆಯ ಆಧರಿಸಿದೆ. ಇಲ್ಲಿ ಜನರು ಬೆಟ್ಟಿಂಗ್ ಆಡಿ ಸುಲಭವಾಗಿ ಹಣ ಗಳಿಕೆ ಮಾಡುತ್ತಾರೆ. ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ ಅಷ್ಟೇ ಎಂದು ಹೇಳಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1