ವೈಭವ್​ ವಿಶ್ವದಾಖಲೆಯ ಶತಕಕ್ಕೆ ಧೂಳೀಪಟವಾಯ್ತು ಗುಜರಾತ್! ರಾಜಸ್ಥಾನಕ್ಕೆ 8 ವಿಕೆಟ್​​ಗಳ ಭರ್ಜರಿ ಜಯ.

14 ವರ್ಷದ ಯುವ ಬ್ಯಾಟ್ಸ್​ಮನ್ ವೈಭವ್ ಸೂರ್ಯವಂಶಿ ಸಿಡಿಸಿದ ವಿಶ್ವದಾಖಲೆಯ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟನ್ಸ್ ನೀಡಿದ್ದ 210 ರನ್​ಗಳ ಕಠಿಣ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಕೇವಲ 16 ಓವರ್​ಗಳಲ್ಲೇ 2 ವಿಕೆಟ್ ಕಳೆದುಕೊಂಡು ತಲುಪಿತು. ವೈಭವ್ ಸೂರ್ಯವಂಶಿ (101) ಸಿಡಿಲಬ್ಬರದ ಶತಕ ಸಿಡಿಸಿದರೆ, ಯಶಸ್ವಿ ಜೈಸ್ವಾಲ್ (70) ಅಜೇಯ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.

210 ರನ್​ಗಳ ಕಠಿಣ ಸವಾಲನ್ನ ಬೆನ್ನಟ್ಟಿದ ರಾಜಸ್ಥಾನ್​​ ತವರಿನ ಅಭಿಮಾನಿಗಳ ಮುಂದೆ ಕೊನೆಗೂ ಗೆಲುವಿನ ಹಳಿಗೆ ಮರಳಿತು. ಯಶಸ್ವಿ ಜೈಸ್ವಾಲ್ ಹಾಗೂ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಗುಜರಾತ್ ಟೈಟನ್ಸ್ ಬೌಲರ್​ಗಳನ್ನ ಚೆಂಡಾಡಿದರು. ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್​ ಜೊತೆಯಾಟದಲ್ಲಿ 11. 5 ಓವರ್​ಗಳಲ್ಲಿ 166 ರನ್​ಗಳ ಜೊತೆಯಾಟ ನೀಡಿದರು. ಅದರಲ್ಲೂ ವೈಭವ್ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್​ಗಳ ಸಹಿತ 101 ರನ್​ಗಳಿಸಿ ಚರಿತ್ರೆ ಸೃಷ್ಟಿಸಿದರು. ವೈಭವ್ ಐಪಿಎಲ್ ಇತಿಹಾಸದಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.

ಯಶಸ್ವಿ ಜೈಸ್ವಾಲ್ 9 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 70 ರನ್​ಗಳಿಸಿದರೆ, ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 32 ರನ್​ಗಲಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ವೈಭವ್, ರಿಯಾನ್ ಪರಾಗ್ ಹಾಗೂ ರಿಯಾನ್ ಪರಾಗ್ ಸಿಡಿಲಬ್ಬರಕ್ಕೆ 210ರನ್​ಗಳ ಗುರಿಯನ್ನ ಕೇವಲ 15. 5 ಓವರ್​ಗಳಲ್ಲೇ ತಲುಪಿತು.

ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್ 24ಕ್ಕೆ1, ಪ್ರಸಿಧ್ ಕೃಷ್ಣ 47ಕ್ಕೆ1 ವಿಕೆಟ್ ಪಡೆದರು. ಉಳಿದ ಎಲ್ಲಾ ಬೌಲರ್​ಗಳು ದುಬಾರಿಯಾದರು.

ಇದಕ್ಕು ಮುನ್ನ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್ ಟೈಟನ್ಸ್  20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 209ರನ್​ಗಳಿಸಿತ್ತು. ಸಾಯಿ ಸುದರ್ಶನ್ ಹಾಗೂ ನಾಯಕ ಗಿಲ್​ ಮೊದಲ ವಿಕೆಟ್​ ಜೊತೆಯಾಟದಲ್ಲಿ 93 ರನ್​ ಸೇರಿಸಿದರು. ಸುದರ್ಶನ್ 30 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 39 ರನ್​ಗಳಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಆಗಮಿಸಿದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ 2ನೇ ವಿಕೆಟ್ ಜೊತೆಯಾಟದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಬ್ಬರು ಕೇವಲ 38 ಎಸೆತಗಳಲ್ಲಿ 74 ರನ್​ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಶುಭ್​​ಮನ್ ಗಿಲ್ 50 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​ಗಳ ಸಹಿತ 84 ರನ್​ಗಳಿಸಿ ತೀಕ್ಷಣಗೆ 2ನೇ ಬಲಿಯಾದರು.

ಜೋಸ್​ ಬಟ್ಲರ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 50 ರನ್​ಗಳಿಸಿದರು. ವಾಷಿಂಗ್ಟನ್ ಸುಂದರ್ 8 ಎಸೆತಗಳಲ್ಲಿ 13ರನ್​ಗಳಿಸಿದರು. ರಾಹುಕ್ ತೆವಾಟಿಯಾ 9,  ಶಾರುಖ್ ಖಾನ್ 5 ರನ್​​ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಮಹೀಶ್ ತೀಕ್ಷಣ 35ಕ್ಕೆ2, ಸಂದೀಪ್ ಶರ್ಮಾ 33ಕ್ಕೆ1, ಜೋಫ್ರಾ ಆರ್ಚರ್ 49ಕ್ಕೆ1 ವಿಕೆಟ್ ಪಡೆದು ಮಿಂಚಿದರು.

2ನೇ ವೇಗದ ಶತಕ ಸಿಡಿಸಿದ ವೈಭವ್

35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ರಾಜಸ್ಥಾನ್ ರಾಯಲ್ಸ್ ತಂಡದ ಪರವೇ ಯುಸುಫ್ ಪಠಾಣ್  37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.  ಇದೀಗ ಆ ದಾಖಲೆ ವೈಭವ್ ಹೆಸರಿಗೆ ಸೇರಿಕೊಂಡಿದೆ.

ಅತ್ಯಂತ ಕಿರಿಯ ಬ್ಯಾಟರ್​

ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವದಾಖಲೆಯೂ ವೈಭವ್ ಸೂರ್ಯವಂಶಿಯದ್ದಾಯಿತು. 14 ವರ್ಷ, 32 ದಿನಗಳಲ್ಲಿ ಈ ಸಾಧನೆ ಮಾಡಿದರು. ಕರ್ನಾಟಕದ ಮನೀಶ್ ಪಾಂಡೆ 2009ರಲ್ಲಿ 19 ವರ್ಷ 253 ದಿನಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.

Source : News18 Kannada

Leave a Reply

Your email address will not be published. Required fields are marked *