ಒಳಮೀಸಲಾತಿ ಇಲ್ಲದ 56,432 ಹುದ್ದೆಗಳ ನೇಮಕಾತಿ ನೋಟಿಫಿಕೇಷನ್ ರದ್ದುಪಡಿಸಿ: ಸಿಎಂ ಸಿದ್ದರಾಮಯ್ಯಗೆ ಹೆಚ್. ಆಂಜನೇಯ ಪತ್ರ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 10

ಒಳಮೀಸಲಾತಿ ಇಲ್ಲದೆ 56432 ಹುದ್ದೆಗಳನ್ನು ತುಂಬಲು ಹೊರಡಿಸಿರುವ ನೋಟಿಫಿಕೇಷನ್ ವಾಪಸ್ಸು ಪಡೆದು, ಮಾದಿಗರಿಗೆ ಶೇ6 ರಷ್ಟು ಒಳಮೀಸಲಾತಿ ನೀಡಿ, ಒಳಮೀಸಲಾತಿ ಅನ್ವಯವೇ  56432 ಹುದ್ದೆಗಳನ್ನು ತುಂಬಲು ಮರು ನೋಟಿಫೀಕೇಷನ್ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವರಾದ ಹೆಚ್.ಅಂಜನೇಯ ರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಸಿಗುತ್ತಿಲ್ಲ, ಒಳಮೀಸಲಾತಿ ಬೇಕೇ ಬೇಕೆಂದು ಕಳೆದ 35 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಈಗಾಗಲೇ ಒಳಮೀಸಲಾತಿ ಅನುಷ್ಠಾನಗೊಂಡಿದೆ. ಅಲ್ಲಿ ಯಾವುದೇ ಗೊಂದಲ ಇಲ್ಲದೆ ಪರಿಶಿಷ್ಟ ಜಾತಿಯವರೆಲ್ಲರೂ ಅದನ್ನು ಸ್ವಾಗತಿಸಿ, ಮೀಸಲಾತಿ ಹಂಚಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಮಾಡಬೇಕಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಮೀಸಲಾತಿ ಸೌಲಭ್ಯ ಪಡೆದಿರುವ ಸಮುದಾಯಗಳು ಅನಾವಶ್ಯಕವಾಗಿ ಸಂವಿಧಾನ ವಿರುದ್ಧವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಮಾದಿಗ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ. 

ಸರ್ವರಿಗೂ  ಸಮಪಾಲು, ಸಮಬಾಳು ನೀತಿಯ ಹೃದಯವಂತಿಕೆಯನ್ನು ಪ್ರದರ್ಶಿಸಬೇಕಾದ ಕೆಲವು ಸಮುದಾಯಗಳು ಮಾದಿಗರ ಏಳಿಗೆಯನ್ನು ಸಹಿಸದೆ ಒಳಮೀಸಲಾತಿ ವಿಷಯದಲ್ಲಿ ಇಲ್ಲಸಲ್ಲದ ಗೊಂದಲ ಉಂಟು ಮಾಡುತ್ತಿವೆ.ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ, ಬಳಿಕ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯ ಶಿಫಾರಸು, ಪ್ರಸ್ತುತ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಕೆಲವು ಸಮುದಾಯಗಳು ಒಪ್ಪಲಿಲ್ಲ. ಎಲ್ಲ ಆಯೋಗಗಳ ವರದಿಯನ್ನು ಆ ಸಮುದಾಯಗಳಿಗೆ ಅನುಕೂಲ ಆಗುವ ರೀತಿಯಲ್ಲಿ ತಿದ್ದುಪಡಿ ಮಾಡಲಾಯಿತು. ಇದರಿಂದಾಗಿ ಅನಾಥ, ಅಸ್ಪೃಶ್ಯ ಸಮುದಾಯವಾದ ಅಲೆಮಾರಿಗಳಿಗೆ ತೀವ್ರ ಅನ್ಯಾಯ ಆಗಿದೆ. ಇಷ್ಟೆಲ್ಲ ಅನ್ಯಾಯ, ವಿರೋಧಗಳ ಮಧ್ಯೆಯೂ ಒಳಮೀಸಲಾತಿ ಜಾರಿಗೊಂಡಿರುವುದನ್ನು ಸ್ವಾಗತಿಸುತ್ತಾ ಆದರೆ, ಈಗ ಜಾರಿಗೊಳಿಸಿರುವ ಒಳಮೀಸ ಲಾತಿಯನ್ನು ಅನುಷ್ಠಾನಗೊಳಿಸಲು ಅಡ್ಡಿಪಡಿಸಲಾಗುತ್ತಿದೆ. ವಿಶ್ವವಿದ್ಯಾಲ ಯಗಳಲ್ಲಿ ವಿಷಯವಾರು ನೇಮಕಾತಿ ಕೈಬಿಟ್ಟು, ವಿಶ್ವವಿದ್ಯಾಲಯಗಳನ್ನೇ ಒಂದು ಘಟಕವಾಗಿಸುವ ಹುನ್ನಾರು ನಡೆಯುತ್ತಿದೆ ಎಂದು ದೂರಿದ್ದಾರೆ. 

ಇದೀಗ, ಒಳಮೀಸಲಾತಿ ಕೈಬಿಟ್ಟು 56432 ಹುದ್ದೆಗಳ ನೇಮಕಾತಿ ಮಾಡಲು ಮುಂದಾಗಿರುವುದು ದುರದೃಷ್ಟಕರ. ಕೂಡಲೇ 56432 ಹುದ್ದೆಗಳನ್ನು ತುಂಬಲು ನೀಡಿರುವ ನೋಟಿಪಿಕೇಷನ್ ರದ್ದುಗೊಳಿಸಿ ಒಳ ಮೀಸಲಾತಿಯನ್ನು ಅಳವಡಿಸಿ ಹುದ್ದೆ ತುಂಬುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಪಟ್ಟಭದ್ರರ ಮಾತುಗಳನ್ನು ಧಿಕ್ಕರಿಸಿ ಅಸ್ಪೃಶ್ಯ, ನೊಂದ ಮಾದಿಗರಿಗೆ ನ್ಯಾಯ ಕೊಡಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಸಚಿವರಾದ ಹೆಚ್.ಅಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೀಸಲಾತಿ ಶೇ 50ರಂತೆ 56432 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಿರುವುದರಿಂದ ಪರಿಶಿಷ್ಟ ಜಾತಿಗಳಿಗೆ ಶೇ15ರಷ್ಟು ಪ್ರಮಾಣದಲ್ಲಿಯೇ ತುಂಬಲೇಬೇಕು ಎನ್ನುವುದಾದರೆ ಒಳಮೀಸಲಾತಿಯನ್ನು ಅಳವಡಿಸಬೇಕು. ಎಲ್ಲ ಆಯೋಗಗಳು ಮಾದಿಗರಿಗೆ ಶೇಕಡಾ 6ರಷ್ಟು ಮೀಸಲಾತಿ ನಿಗದಿ ಪಡಿಸಿದೆ ಅದರಂತೆ ಶೇ6 ರಷ್ಟು ಮೀಸಲಾತಿಯನ್ನು ಮಾದಿಗರಿಗೆ ನಿಗದಿಪಡಿಸಿ ಹುದ್ದೆಗಳನ್ನು ತುಂಬುವ ತೀರ್ಮಾನ ಮಾಡಬೇಕು. ಉದ್ಯೋಗದಲ್ಲಿ ಒಳಮೀಸಲಾತಿ ನೀಡಿರುವಾಗ ಬಡ್ತಿಯಲ್ಲೂ ಒಳಮೀಸಲಾತಿ ನೀಡುವುದು ನ್ಯಾಯಸಮ್ಮತ. ಆದ್ದರಿಂದ, ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಬಡ್ತಿ ಮತ್ತು ಮುಂಬಡ್ತಿ ಬ್ಯಾಕ್ಲಾಗ್ ನೀಡುವಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು. ಕರ್ನಾಟಕದಲ್ಲೂ ಮನೆ ಹಂಚಿಕೆ, ನಿವೇಶನ ಹಂಚಿಕೆ, ಸಾಲ ಸೌಲಭ್ಯ, ಕೈಗಾರಿಕೆ ನಿವೇಶನಗಳ ಹಂಚಿಕೆ, ಹಾಸ್ಟೆಲ್ ಸೀಟುಗಳ ಹಂಚಿಕೆ, ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ವಸತಿ, ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಒಳಮೀಸಲಾತಿ ಜಾರಿಗೊಳ್ಳಬೇಕು. ಆಂಧ್ರ-ತೆಲಂಗಾಣ ಮಾದರಿಯಲ್ಲಿ ಆಯಾ ಜಿಲ್ಲೆಗಳಲ್ಲಿನ ಪರಿಶಿಷ್ಟ ಜಾತಿ ಜನಸಂಖ್ಯೆಯ ಅನುಗುಣವಾಗಿ ಯೋಜನೆಗಳನ್ನು, ಆರ್ಥಿಕ ಸೌಲಭ್ಯಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದೇ ನೀತಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು. 

ಲೋಕೋಪಯೋಗಿ ಇಲಾಖೆ ಮತ್ತಿತರ ಇಲಾಖೆಗಳಲ್ಲಿ ಸರಬರಾಜು ಮತ್ತು ಗುತ್ತಿಗೆಯಲ್ಲಿ  1 ಕೋಟಿವರೆಗೆ ಮೀಸಲಾತಿ ಜಾರಿಯಲ್ಲಿದೆ. ಗುತ್ತಿಗೆ ಮತ್ತು ಸರಬರಾಜಿನಲ್ಲೂ ಒಳಮೀಸಲಾತಿ ಅನ್ವಯಿಸಬೇಕು. ಪರಿಶಿಷ್ಟ ಜಾತಿ ಉಪಯೋಜನೆಯಲ್ಲಿ (ಎಸ್ಸಿಎಸ್ಪಿ) ಮತ್ತು ಟಿಎಸ್ಪಿ (ಬುಡಕಟ್ಟು ಉಪಯೋಜನೆ), ಎಸ್ಸಿಎಸ್ಪಿ ಅಡಿ ಒದಗಿಸಿದ ಒಟ್ಟು ಅನುದಾನದಲ್ಲಿ ಶೇ 6ರಷ್ಟನ್ನು ಮಾದಿಗ ಸಮುದಾಯಕ್ಕೆ ವೆಚ್ಚ ಮಾಡುವ ಮೂಲಕ ಆರ್ಥಿಕ ಮೀಸಲಾತಿಯನ್ನು ಒದಗಿಸಬೇಕು. ಒಳಮೀಸಲಾತಿ ಕಾರಣಕ್ಕೆ ರಾಜ್ಯದಲ್ಲಿ 2023ರಿಂದ ಇಲ್ಲಿಯವರೆಗೂ ಉದ್ಯೋಗ ನೇಮಕಾತಿ ಆಗಿಲ್ಲ. 56432 ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೇ ನೋಟಿಫಿಕೇಷನ್ ಹೊರಡಿಸಿರುವುದು ದುರದೃಷ್ಟಕರ. ಒಳ ಮೀಸಲಾತಿ ಇಲ್ಲದೆ ಹುದ್ದೆಗಳನ್ನು ತುಂಬಲು ತೀರ್ಮಾನಿಸಿರುವುದನ್ನು ವಿರೊಧಿಸಿ, ಮಾದಿಗ ಸಮುದಾಯದ ಹೋರಾಟಗಾರರು ರಾಜ್ಯದಾದ್ಯಂತ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದು, ಈ ಚಳವಳಿ ತೀವ್ರಗೊಳ್ಳುವ ಮುಂಚಿತವಾಗಿಯೇ ಈಗ ಹೊರಡಿಸಿರುವ 56432 ಹುದ್ದೆಗಳನ್ನು ತುಂಬುವ ನೋಟಿಫಿಕೇಷನ್ ಕೂಡಲೇ ವಾಪಸ್ಸು ಪಡೆದು ಒಳಮೀಸಲಾತಿ ಅಳವಡಿಸಿ ಹುದ್ದೆಗಳನ್ನು ತುಂಬುವ ತೀರ್ಮಾನವನ್ನು ಕೈಗೊಳ್ಳಬೇಕು ಮಾಜಿ ಸಚಿವರಾದ ಹೆಚ್.ಅಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *