
800 ಮಕ್ಕಳಲ್ಲಿ ಒಬ್ಬರಿಗೆ ಸೀಳು ತುಟಿ ಸಮಸ್ಯೆ ಉಂಟಾಗುತ್ತದೆ. 6-9 ತಿಂಗಳ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು. ಎಸ್‌ಡಿಎಂ ಧಾರವಾಡ ಮತ್ತು ಸ್ಮೈಲ್‌ಟ್ರೇನ್ ಸಂಸ್ಥೆಗಳು ಉಚಿತ ಚಿಕಿತ್ಸೆ ನೀಡುತ್ತವೆ.
ಮಕ್ಕಳು (Childrens) ಹುಟ್ಟಿದಾಗ ಅವರ ಮನೆಯವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಹುಟ್ಟಿದ ಮಕ್ಕಳಿಗೆ ಸೀಳು ತುಟಿಯಂತಹ (Cleft Lip) ಸಮಸ್ಯೆ ಇದ್ದರೆ ಅದೂ ಕೂಡ ಪಾಲಕರಿಗೆ (Parents) ಒಂದು ದೊಡ್ಡ ಆಘಾತವೇ ಸರಿ. ಈ ಸಂದರ್ಭದಲ್ಲಿ ಪಾಲಕರು ದಿಕ್ಕೇ ತೋಚದ ಸ್ಥಿತಿಗೆ ಹೋಗುತ್ತಾರೆ. ಯಾರಿಗಾದರೂ ಇದು ನೋವನ್ನು ತರುವ ಸಂಗತಿಯೇ ಆಗಿದ್ದರೂ ದಿನದಿಂದ ದಿನಕ್ಕೆ ವೈದ್ಯಕೀಯ ಜಗತ್ತಿನಲ್ಲಿ ಆವಿಷ್ಕಾರಗಳೂ ನಡೆಯುತ್ತಿವೆ. ಇನ್ನೂ ಈ ಬಗ್ಗೆ ಎಸ್‌ಡಿಎಂ ವಿಶ್ವವಿದ್ಯಾಲಯದ ಕ್ರಾನಿಯೋಫೇಶಿಯಲ್ ಕೇಂದ್ರದ ನಿರ್ದೇಶಕರಾದ ಡಾ. ನಿರಂಜನ್‌ಕುಮಾರ್ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
800 ಮಕ್ಕಳಲ್ಲಿ ಒಬ್ಬರಿಗೆ ಸೀಳು ತುಟಿ
ಸಾಮಾನ್ಯವಾಗಿ ಸೀಳು ತುಟಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದರೆ ಖರ್ಚು ಹೆಚ್ಚು ಎಂದು ಹಲವು ಪಾಲಕರು ಕಂಗಾಲಾಗುತ್ತಾರೆ. ಆದರೆ ನಿಜವಾಗಿಯೂ ಈ ವಿಚಾರಕ್ಕೆ ಭಯ ಪಡುವ ಅಗತ್ಯವಿಲ್ಲ. ಇಂದು ಹಲವು ಆಸ್ಪತ್ರೆಗಳು ಉಚಿತವಾಗಿ ಸೀಳು ತುಟಿಯ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿವೆ. ಸೀಳು ತುಟಿ ಮತ್ತು ಅಂಗಳ ಸಮಸ್ಯೆ ಹುಟ್ಟು ನ್ಯೂನತೆಯಾಗಿದ್ದು 8 ರಿಂದ 12 ವಾರದ ಭ್ರೂಣಾವಸ್ಥೆಯಲ್ಲಿ ತುಟಿ ಹಾಗೂ ಅಂಗಳದ ಅಂಗಾಂಶಗಳ ಜೋಡಣೆಯ ವಿಫಲತೆಯಿಂದ ಉಂಟಾಗುತ್ತದೆ. ಸಂಶೋಧನೆಗಳು ಹೇಳುವ ಪ್ರಕಾರ ಭಾರತದಲ್ಲಿ ಸರಾಸರಿ 800 ಮಕ್ಕಳಲ್ಲಿ ಒಬ್ಬರಿಗೆ ಹೀಗಾಗುವ ಸಾಧ್ಯತೆಯಿದೆ. ಭಾರತದಲ್ಲಿ ಸುಮಾರು 14 ಲಕ್ಷ ಮಕ್ಕಳು ಈ ನ್ಯೂನತೆಯಿಂದ ಪೀಡಿತರಾಗಿದ್ದಾರೆ.
ಸೀಳು ತುಟಿಗೆ ಕಾರಣಗಳು
ಈ ಸೀಳು ತುಟಿಗೆ ನಿರ್ದಿಷ್ಟ ಕಾರಣಗಳು ಇಲ್ಲವಾದರೂ ಆನುವಂಶಿಕತೆ ಹಾಗೂ ಭ್ರೂಣದ ಪರಿಸರಕ್ಕೆ ಸಂಬಂಧಿಸಿದ ಕಾರಣಗಳಿಂದ ಉಂಟಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಅನಾರೋಗ್ಯ, ಸಾಂಕ್ರಾಮಿಕ ರೋಗಗಳು, ಆಹಾರಾಂಶಗಳ ಕೊರತೆ ಹಾಗೂ ಗರ್ಭಾವಸ್ಥೆಯಲ್ಲಿ ಭ್ರೂಣಕ್ಕೆ ಹಾನಿಕಾರಕವಾದ ಔಷಧಗಳ ಸೇವನೆಯೂ ಇದಕ್ಕೆ ಕಾರಣವಾಗಬಹುದು. ಈ ಸಮಸ್ಯೆಯಿಂದ ಮಗುವಿನ ಮೇಲೆ ಹಲವು ರೀತಿಯಲ್ಲಿ ದುಷ್ಪರಿಣಾಮ ಉಂಟಾಗುತ್ತವೆ. ಮುಖ್ಯವಾಗಿ, ಸೀಳು ತುಟಿಯ ಹಾಗೂ ಅಂಗಳದಿಂದ ಮಗುವಿನ ಆಹಾರ ಸೇವನೆಯಲ್ಲಿ ತೊಂದರೆಯುಂಟಾಗಿ ಮಗುವಿನ ಬೆಳವಣಿಗೆ ಕುಂಠಿತವಾಗುವುದು, ಸೀಳು ಅಂಗಳದಿಂದ ಮಗುವಿನ ಮಾತು ತಡವಾಗಿ ಬರುವುದಲ್ಲದೇ ಅದು ಅಸ್ಪಷ್ಟವಾಗಿರುವುದು, ಮಗುವಿನ ಹಲ್ಲುಗಳು ತಡವಾಗಿ ಹಾಗೂ ವಕ್ರವಾಗಿ ಬರಬಹುದು, ಮೇಲಿಂದ ಮೇಲೆ ಶ್ವಾಸಕೋಶ ಹಾಗೂ ಶ್ವಾಸನಾಳದ ರೋಗಗಳು ಉಂಟಾಗುವುದು, ಮೇಲಿಂದ ಮೇಲೆ ಕಿವಿ ಸೋರುವುದರಿಂದ ಶ್ರವಣ ಶಕ್ತಿ ಕುಂಠಿತವಾಗಬಹುದು. ಈ ನ್ಯೂನತೆಯಿಂದ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಇವೆಲ್ಲ ಸಮಸ್ಯೆಗಳು ಉಂಟಾಗುವ ಕಾರಣ ಜೊತೆಗೆ ಸಮಾಜದಲ್ಲಿ ಮಗು ಇತರರೊಡನೆ ಬೆರೆಯಲು ಹಿಂಜರಿಯುವುದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
6 ರಿಂದ 9 ತಿಂಗಳ ವಯಸ್ಸಿನಲ್ಲಿ ಶಸ್ತ್ರ ಚಿಕಿತ್ಸೆ
ಈ ಸಮಸ್ಯೆಗಿರುವ ಒಂದೇ ಪರಿಹಾರವೆಂದರೆ ಅದು ಶಸ್ತ್ರಚಿಕಿತ್ಸೆ. ಈ ನ್ಯೂನತೆಯುಳ್ಳ ಮಕ್ಕಳು ಸಮಯೋಚಿತ ಚಿಕಿತ್ಸೆ ಪಡೆದಲ್ಲಿ ಇವರೂ ಇತರೇ ಸಾಮಾನ್ಯ ಮಕ್ಕಳಂತೆ ಜೀವನ ನಡೆಸಬಹುದು. 6 ರಿಂದ 9 ತಿಂಗಳ ವಯಸ್ಸಿನಿಂದ ಈ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಬಹುದು. ಇದನ್ನು ಮಗುವಿನ ಬೆಳವಣಿಗೆ, ಆರೋಗ್ಯ ಹಾಗೂ ನ್ಯೂನತೆಯ ಗಾತ್ರದ ಮೇಲೆ ನಿರ್ಧರಿಸಲಾಗುತ್ತದೆ.
ಶಸ್ತ್ರಚಿಕಿತ್ಸೆಗೆ ಬಂದ ನಂತರ ವೈದ್ಯರ ಪಾತ್ರ ಹೇಗೆ ಮುಖ್ಯವೋ ಅಷ್ಟೇ ಮುಖ್ಯ ಪಾತ್ರ ಪಾಲಕರದ್ದೂ ಆಗಿರುತ್ತದೆ ಎನ್ನುವುದನ್ನು ನೆನಪಿಡಬೇಕು. ಇಂತಹ ಮಕ್ಕಳು ಹುಟ್ಟಿದಾಗ ಪಾಲಕರು ನಿರಾಶರಾಗದೇ ವೈದ್ಯರ ಸಲಹೆಯ ಮೇರೆಗೆ ಮಗುವಿನ ಆರೈಕೆ ಪ್ರಾರಂಭಿಸಬೇಕು. ಸಾಧ್ಯವಾದಷ್ಟು ಎದೆ ಹಾಲನ್ನು ಕುಡಿಸಲು ತಾಯಿಯನ್ನು ಪ್ರೇರೇಪಿಸಬೇಕು. ಬೇರೆ ಹಾಲನ್ನು ನೀಡಬೇಕಾದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದು ಕಡ್ಡಾಯವಾಗುತ್ತದೆ.
ಕೆಲವೊಮ್ಮೆ ಈ ಸೀಳು ತುಟಿ ಮತ್ತು ಅಂಗಳ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಮುಖದ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಯೂ ಇರಬಹುದು. ಆ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ತಡ ಮಾಡದೆಯೆ ವೈದ್ಯರನ್ನು ಭೇಟಿ ಮಾಡುವುದನ್ನು ಮರೆಯಬಾರದು. ಅಮೇರಿಕಾದ ಸ್ಮೈಲ್‌ಟ್ರೇನ್‌ಎನ್ನುವ ಸಂಸ್ಥೆಯು ಇಂತಹ ನ್ಯೂನತೆಯುಳ್ಳ ಸಾವಿರಾರು ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ನೀಡಿದ್ದು ಎಸ್‌ಡಿಎಂ ಧಾರವಾಡದಲ್ಲಿಯೂ ಈ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.
News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1