ಮನುಷ್ಯ ಆರೋಗ್ಯವಾಗಿರುವುದು ಬಹಳ ಮುಖ್ಯ. ದುಡ್ಡಿದ್ದ ಮಾತ್ರಕ್ಕೆ ಎಲ್ಲವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾವು ಆರೋಗ್ಯವಾಗಿದ್ದು ನಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಉತ್ತಮ ಜೀವನಶೈಲಿ (Lifestyle), ಯೋಗ, ವ್ಯಾಯಾಮ ಮತ್ತು ಸಮತೋಲಿತ ಆಹಾರ (Balanced diet) ಎಲ್ಲವೂ ಬಹಳ ಮುಖ್ಯವಾಗುತ್ತದೆ.
ಆದರೆ ಅನೇಕರು ತಮಗೆ ಬೇಕಾದುದನ್ನು ಸೇವನೆ ಮಾಡುವ ಮೂಲಕ ಕಳಪೆ ಜೀವನಶೈಲಿಯನ್ನು ರೂಢಿಸಿಕೊಂಡಿದ್ದು ಅದರ ಪರಿಣಾಮವಾಗಿ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಾರೆ. ಬಳಿಕ ಆರೋಗ್ಯ (Health)ತೀವ್ರ ಹದಗೆಟ್ಟಾಗ, ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿ ಸಂಬಂಧಿತ ಔಷಧವನ್ನು ಸೇವನೆ ಮಾಡುತ್ತಾರೆ. ಈ ರೀತಿ ಔಷಧಿಗಳನ್ನು ತೆಗೆದುಕೊಳ್ಳುವುದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ ಔಷಧಿಗಳೇ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಮಾತ್ರವಲ್ಲ, ಅವುಗಳನ್ನು ಸರಿಯಾಗಿ ತೆಗೆದುಕೊಳ್ಳದಿದ್ದರೆ, ಅವು ಸಹಾಯ ಮಾಡುವ ಬದಲು ಹಾನಿಯನ್ನುಂಟುಮಾಡುತ್ತವೆ. ಇದಕ್ಕೆ ಕಾರಣ ಅವುಗಳೊಂದಿಗೆ ಸೇವನೆ ಮಾಡುವಂತಹ ಆಹಾರ. ಅಂದರೆ ಔಷಧಿಗಳನ್ನು ತೆಗೆದುಕೊಂಡ ನಂತರ ಸೇವಿಸುವ ಆಹಾರಗಳು (Foods that interact with medication) ಅವುಗಳ ಮೇಲೆ ಪ್ರತಿಕ್ರಿಯಿಸಬಹುದು. ಹಾಗಾದರೆ ಔಷಧಿಗಳನ್ನು ತೆಗೆದುಕೊಳ್ಳುವಾಗ ಅಥವಾ ತೆಗೆದುಕೊಂಡ ನಂತರ ಯಾವ ರೀತಿಯ ಆಹಾರವನ್ನು ಸೇವಿಸಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಿ.
ದ್ರಾಕ್ಷಿ ಜ್ಯೂಸ್ ಅಥವಾ ಕ್ರ್ಯಾನ್ಬೆರಿ ರಸ
ಬಹಳಷ್ಟು ಸಂದರ್ಭಗಳಲ್ಲಿ ನಾವು ಸೇವಿಸುವ ಆಹಾರ ಔಷಧದ ಮೇಲೆ ಪ್ರಭಾವ ಬೀರಬಹುದು. ಏಕೆಂದರೆ ಕೆಲವರು ಹಣ್ಣಿನ ರಸ, ಹಾಲು ಅಥವಾ ಮಜ್ಜಿಗೆಯೊಂದಿಗೆ ಔಷಧಿಗಳನ್ನು ಸೇವಿಸುತ್ತಾರೆ. ಇದು ಸರಿಯಾದ ವಿಧಾನವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಇದರ ಪರಿಣಾಮವಾಗಿ, ಅಡ್ಡಪರಿಣಾಮಗಳು ಉಂಟಾಗಬಹುದು. ಅದೇ ರೀತಿ ದ್ರಾಕ್ಷಿ ರಸ ಅಥವಾ ಅಥವಾ ಜ್ಯೂಸ್ ಗಳನ್ನು ಯಾವುದೇ ರೀತಿಯ ಔಷಧಿಯೊಂದಿಗೆ ತೆಗೆದುಕೊಳ್ಳಬಾರದು. ಓಮನ್ ಮೆಡಿಕಲ್ ಜರ್ನಲ್ ಪ್ರಕಾರ, ದ್ರಾಕ್ಷಿ ರಸವು ದೇಹವು ಔಷಧಿಗಳನ್ನು ಚಯಾಪಚಯಗೊಳಿಸುವ ವಿಧಾನವನ್ನು ಹದಗೆಡಿಸುತ್ತದೆ, ಇದು ಔಷಧಿಯ ಮೇಲೆಯೇ ಪರಿಣಾಮ ಬೀರುತ್ತದೆ. ಮಾತ್ರವಲ್ಲ ದ್ರಾಕ್ಷಿ ರಸ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿಯಾಗಿ, ಹೊಟ್ಟೆ ನೋವು, ವಾಂತಿ, ಬೆವರುವುದು, ತಲೆನೋವು ಮತ್ತು ಹೆಚ್ಚಿದ ಹೃದಯ ಬಡಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇನ್ನು ಕ್ರ್ಯಾನ್‌ಬೆರಿ ರಸ ಕೂಡ ಔಷಧ ತೆಗೆದುಕೊಳ್ಳುವವರಿಗೆ ಒಳ್ಳೆಯದಲ್ಲ ಅದರಲ್ಲಿಯೂ ವಯಸ್ಸಾದವರು ಯಾವುದೇ ಕಾರಣಕ್ಕೂ ಇದನ್ನು ಕುಡಿಯಬಾರದು.
ಬ್ರೊಕೊಲಿ, ಪಾಲಕ್
ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳುವವರು ಆಕಸ್ಮಿಕವಾಗಿಯೂ ಬ್ರೊಕೊಲಿ ಮತ್ತು ಪಾಲಕ್ ನಂತಹ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಈ ಆಹಾರಗಳಲ್ಲಿ ವಿಟಮಿನ್ ಕೆ ಅಧಿಕವಾಗಿರುತ್ತದೆ. ಪರಿಣಾಮವಾಗಿ, ಇವುಗಳನ್ನು ಸೇವಿಸಿದಾಗ, ಔಷಧಿಯ ಪರಿಣಾಮವು ಕಡಿಮೆಯಾಗುತ್ತದೆ. ಇದಲ್ಲದೆ, ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಕೆ ಸೇವಿಸುವುದರಿಂದ ರಕ್ತ ತೆಳುಗೊಳಿಸುವ ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು.
ಚೀಸ್, ರೆಡ್ ವೈನ್, ಚೆನ್ನಾಗಿ ಮಾಗಿದ ಬಾಳೆಹಣ್ಣು
ಔಷಧಿ ತೆಗೆದುಕೊಳ್ಳುವಾಗ ಅಥವಾ ತೆಗೆದುಕೊಂಡ ನಂತರ ಚೀಸ್, ರೆಡ್ ವೈನ್ ಮತ್ತು ಚೆನ್ನಾಗಿ ಮಾಗಿದ ಬಾಳೆಹಣ್ಣುಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಏಕೆಂದರೆ ಅವುಗಳಲ್ಲಿ ಹೆಚ್ಚಿನ ಮಟ್ಟದ ಟೈರಮೈನ್ ಇದ್ದು, ಇದು ರಕ್ತದೊತ್ತಡದ ಏರಿಕೆಗೆ ಕಾರಣವಾಗಬಹುದು. ಪರಿಣಾಮವಾಗಿ, ಔಷಧವು ಕೆಲಸ ಮಾಡುವುದಿಲ್ಲ. ಮಾತ್ರವಲ್ಲ ಇದು ಹೊಟ್ಟೆ ನೋವು, ವಾಂತಿ, ಬೆವರುವುದು, ತಲೆನೋವು ಮತ್ತು ಹೆಚ್ಚಿದ ಹೃದಯ ಬಡಿತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕಾಫಿ
ಕಾಫಿಯಲ್ಲಿ ಬಹಳಷ್ಟು ಕೆಫೀನ್ ಇರುತ್ತದೆ. ಇದು ಥಿಯೋಫಿಲಿನ್ ನಂತಹ ಬ್ರಾಂಕೋಡಿಲೇಟರ್‌ಗಳೊಂದಿಗೆ ಹೆಚ್ಚು ಪ್ರತಿಕ್ರಿಯಿಸುತ್ತದೆ. ಇದು ಚಡಪಡಿಕೆ, ವಾಂತಿ, ತಲೆನೋವು ಮತ್ತು ಕಿರಿಕಿರಿಯಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಅಡ್ಡಪರಿಣಾಮಗಳು ಉಂಟಾಗುತ್ತವೆ. ಇವೆರಡೂ ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಅನಿಯಮಿತವಾಗಿ ಕಾಫಿ ಸೇವಿಸುವ ರೋಗಿಗಳಿಗೆ, ಥಿಯೋಫಿಲಿನ್ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಔಷಧಿಗಳನ್ನು ತೆಗೆದುಕೊಳ್ಳುವವರು ಕಾಫಿ ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
Views: 16