Head and Neck Cancers in India: ಭಾರತದಲ್ಲಿ ವಾರ್ಷಿಕವಾಗಿ ಶೇ 30ರಷ್ಟು ಹೆಡ್ ಆಯಂಡ್ ನೆಕ್ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.

ನವದೆಹಲಿ: ಭಾರತದಲ್ಲಿ ಹೆಡ್ ಆಯಂಡ್ ನೆಕ್ ಕ್ಯಾನ್ಸರ್ ಉಲ್ಬಣಕ್ಕೆ ಪ್ರಮುಖ ಕಾರಣ ತಂಬಾಕು ಮತ್ತು ಆಲ್ಕೋಹಾಲ್ ಬಳಕೆ.
ಪ್ರತಿ ವರ್ಷ ವರ್ಲ್ಡ್ ಹೆಡ್ ಆಯಂಡ್ ನೆಕ್ ಕ್ಯಾನ್ಸರ್ ಡೇ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರಲ್ಲಿ ಇಂಥ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಅಗತ್ಯವೂ ಇದೆ. ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಕ್ಯಾನ್ಸರ್ ಅವಲೋಕನ ಸಂಸ್ಥೆ ಅಂದಾಜಿಸಿದಂತೆ, 2020ರಲ್ಲಿ ಜಗತ್ತಿನಾದ್ಯಂತ 19.3 ಮಿಲಿಯನ್ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭಾರತ 3ನೇ ಸ್ಥಾನದಲ್ಲಿದ್ದು, ಚೀನಾ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ. ಒಟ್ಟಾರೆ ಜಾಗತಿಕವಾಗಿ ದಾಖಲಾಗಿರುವ ಹೆಡ್ ಆಯಂಡ್ ನೆಕ್ ಕ್ಯಾನ್ಸರ್‌ನ ಶೇ 67.5ರಷ್ಟು ಪ್ರಕರಣಗಳ ಪೈಕಿ ಏಷ್ಯಾದಲ್ಲೇ ಹೆಚ್ಚು ವರದಿಯಾಗಿದ್ದು, ಭಾರತದಲ್ಲಿ ಶೇ 30 ಪ್ರಕರಣಗಳು ಕಂಡುಬಂದಿವೆ. ವಾರ್ಷಿಕವಾಗಿ, ಭಾರತದಲ್ಲಿ ಸರಿಸುಮಾರು 5,00,000 ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, 1,25,000 ಜನರು ಸಾವನ್ನಪ್ಪುತ್ತಿದ್ದಾರೆ.
ವೈದ್ಯರು ಹೇಳುವುದೇನು?: ಹೆಡ್ ಆಯಂಡ್ ನೆಕ್ ಕ್ಯಾನ್ಸರ್ ಎಂಬುದು ಸಾಮಾನ್ಯವಾಗಿ ನಾಲಿಗೆ, ಬಾಯಿ ಮತ್ತು ಗಂಟಲಿನ ಭಾಗದಲ್ಲಿ ಪತ್ತೆಯಾಗುತ್ತದೆ. ಓರೊಫಾರ್ನೆಕ್ಸ್, ನಾಸೊಫಾರ್ನೆಕ್ಸ್, ಹೈಪೋಫಾರ್ನೆಕ್ಸ್, ಲಾಲಾರಸ ಗ್ರಂಥಿ, ಮೂಗಿನ ಭಾಗ ಮತ್ತು ಧ್ವನಿ ಪೆಟ್ಟಿಗೆ ಸೇರಿದಂತೆ ಮುಂತಾದವುಗಳನ್ನು ಒಳಗೊಂಡಿದೆ. ಈ ಕ್ಯಾನ್ಸರ್ ಅನೇಕ ಅಪಾಯದ ಅಂಶಗಳನ್ನು ಹೊಂದಿದೆ. ಇಂಥ ಕ್ಯಾನ್ಸರ್ಗೆ ತಂಬಾಕು ಮತ್ತು ಆಲ್ಕೋಹಾಲ್ ಬಳಕೆ ಹೆಚ್ಚು ಕೊಡುಗೆ ನೀಡುತ್ತದೆ. ದೀರ್ಘಕಾಲದ ಧೂಮಪಾನ ಅಥವಾ ಗುಟ್ಕಾದಂತಹ ತಂಬಾಕು ಸೇವನೆ ಮತ್ತು ಆಲ್ಕೋಹಾಲ್ ಸೇವನೆ ಕೋಶ ಮತ್ತು ಜೆನೆಟಿಕ್ ಮ್ಯೂಟೆಷನ್ ಹಾಳು ಮಾಡುತ್ತವೆ. ಇದು ಕ್ಯಾನ್ಸರ್ ಉಲ್ಬಣಿಸುತ್ತದೆ ಎಂದು ಗುರುಗ್ರಾಮದ ಕ್ಯಾನ್ಸರ್ ಇನ್ಸುಟಿಟ್ಯೂಟ್ನ ವೈಸ್ ಚೇರ್ಮಾನ್ ಡಾ.ದೀಪಕ್ ಸರಿನ್ ತಿಳಿಸಿದ್ದಾರೆ.
ಭಾರತದಲ್ಲಿ ಸುಪಾರಿ ಸೇವನೆ ಮಾಡುವವರಲ್ಲಿ ಬಾಯಿಯೊಳಗಿನ ಚರ್ಮದ ಲೈನಿಂಗ್ ಬದಲಾಗಿ ಅದೂ ಕೂಡ ಬಾಯಿ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇತ್ತೀಚೆಗೆ ಎಚ್ಪಿವಿ ಸೋಂಕು ಕೂಡ ಗಂಟಲಿನ ಕ್ಯಾನ್ಸರ್ನೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ಈ ವೈರಸ್ಗಳು ಓರಲ್ ಸೆಕ್ಸ್ ಅಥವಾ ಈ ರೀತಿಯ ಪರಿಣಾಮದಿಂದಲೂ ದೇಹ ಸೇರುತ್ತದೆ ಎಂದು ಅವರು ಹೇಳಿದ್ದಾರೆ.
ಇಂಥ ಕ್ಯಾನ್ಸರ್ ಲಕ್ಷಣಗಳೇನು?: ಕ್ಯಾನ್ಸರ್.ನೆಟ್ ವರದಿಯನುಸಾರು ಶೇ 70ರಿಂದ 80ರಷ್ಟು ಹೆಡ್ ಆಯಂಡ್ ನೆಕ್ ಕ್ಯಾನ್ಸರ್ಗಳು ತಂಬಾಕು ಬಳಕೆಯೊಂದಿಗೆ ಸಂಬಂಧ ಹೊಂದಿದೆ. ಈ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಇದರಿಂದ ಚೇತರಿಕೆ ಹೊಂದುವ ಪ್ರಮಾಣ ಶೇ 80ರಿಂದ 90ರಷ್ಟಿದೆ. ಗಂಟಲು ಸೋರುವಿಕೆ, ಊತ, ನುಂಗಲು ಕಷ್ಟವಾಗುವುದು, ದೀರ್ಘ ಮೂಗು ಕಟ್ಟಿದ ಅನುಭವ, ಸೈನಸ್ ಸೋಂಕು, ಬಾಯಿಯೊಳಗೆ ಕೆಂಪು ದದ್ದು ಇವುಗಳು ಈ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇಂಥ ಲಕ್ಷಣಗಳನ್ನು ಪತ್ತೆ ಮಾಡಿ ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಕೂಡ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.
ಪರೋಕ್ಷ ಧೂಮಪಾನಿಗಳಲ್ಲೂ ಹೆಡ್ ಆಯಂಡ್ ನೆಕ್ ಕ್ಯಾನ್ಸರ್ ಅಭಿವೃದ್ಧಿ ಹೊಂದುತ್ತದೆ. ಆಲ್ಕೋಹಾಲ್ ಕೂಡ ಇದಕ್ಕೆ ಅಪಾಯದ ಅಂಶವೇ. ಕ್ಯಾನ್ಸರ್‌ನ ಪ್ರಾಥಮಿಕ ಚಿಕಿತ್ಸೆಯಲ್ಲಿ ಸರ್ಜರಿ, ರೆಡಿಯೇಷನ್ ಥೆರಪಿ, ಕಿಮೋಥೆರಪಿ ಮಾಡಲಾಗುತ್ತದೆ. ಇಂಥ ಥೆರಪಿಗಳು ಕೆಲವು ಅಡ್ಡ ಪರಿಣಾಮವನ್ನೂ ಹೊಂದಿದ್ದು, ಇದರಿಂದ ಮಾತಾಡಲು ಅಥವಾ ನುಂಗಲು ಕಷ್ಟಪಡಬಹುದು. ನೋವು, ಅಹಿತಕರ ಅನುಭವ, ಆಯಾಸ, ಸುಸ್ತು, ಕೂದಲು ನಷ್ಟ, ಹಸಿವು ನಷ್ಟದಂತಹ ಸಮಸ್ಯೆ ಕಾಡಬಹುದು.