3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ; ಇಲ್ಲಿದೆ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರ.

ಅಡಿಲೇಡ್‌ ಟೆಸ್ಟ್ ಪಂದ್ಯವನ್ನು 10 ವಿಕೆಟ್​ಗಳಿಂದ ಸೋತಿರುವ ಟೀಂ ಇಂಡಿಯಾ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಿಂದ ಹೊರಬೀಳುವ ಆತಂಕದಲ್ಲಿದೆ. ಇಷ್ಟು ದಿನ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಡಬ್ಲ್ಯುಟಿಸಿ ಫೈನಲ್​ಗೇರಲು ಭಾರತ ಇನ್ನೇಷ್ಟು ಪಂದ್ಯಗಳನ್ನು ಗೆಲ್ಲಬೇಕು? ಯಾವ್ಯಾವ ತಂಡಗಳು ಫೈನಲ್​ ರೇಸ್​ನಲ್ಲಿವೆ ಎಂಬುದನ್ನು ನೋಡುವುದಾದರೆ..

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್​ನಿಂದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಪಾಕಿಸ್ತಾನ, ಇಂಗ್ಲೆಂಡ್ ತಂಡಗಳು ಈಗಾಗಲೇ ಹೊರಬಿದ್ದಿವೆ. ಈಗ ಇವುಗಳ ಪಟ್ಟಿಗೆ ನ್ಯೂಜಿಲೆಂಡ್ ಕೂಡ ಸೇರ್ಪಡೆಯಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನ್ಯೂಜಿಲೆಂಡ್, ಈ ಸೋಲಿನಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ಸುತ್ತಿನ ರೇಸ್‌ನಿಂದ ಹೊರಗುಳಿದಿದೆ.

ಏತನ್ಮಧ್ಯೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ತಲುಪಿದ್ದು, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 60.71 ಆಗಿದೆ. ಮತ್ತೊಂದೆಡೆ 59.26 ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಭಾರತ57.29 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಶ್ರೀಲಂಕಾ ತಂಡ 50 ರಷ್ಟು ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದ್ದರಿಂದ ಈ ಅಗ್ರ ನಾಲ್ಕು ತಂಡಗಳಿಗೆ ಮಾತ್ರ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುವ ಅವಕಾಶವಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಭಾರತಕ್ಕೆ ಇನ್ನೂ ಮೂರು ಪಂದ್ಯಗಳು ಉಳಿದಿವೆ. ಈ ಮೂರೂ ಪಂದ್ಯಗಳಲ್ಲಿ ಭಾರತ ಗೆದ್ದರೆ ಫೈನಲ್‌ಗೆ ಲಗ್ಗೆ ಇಡುವುದು ಖಚಿತ. ಆದರೆ ಆಸ್ಟ್ರೇಲಿಯಾ ವಿರುದ್ಧ ಇನ್ನೊಂದು ಪಂದ್ಯವನ್ನು ಸೋತರೂ ಟೀಂ ಇಂಡಿಯಾ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ.

ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾಗೆ ಇನ್ನು ಐದು ಪಂದ್ಯಗಳು ಬಾಕಿ ಇವೆ. ಇದರಲ್ಲಿ ಭಾರತ ವಿರುದ್ಧ ಮೂರು ಮತ್ತು ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳು ಆಡಬೇಕಿದೆ. ಉಳಿದಿರುವ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದರೆ ಆಸ್ಟ್ರೇಲಿಯ ಫೈನಲ್‌ಗೆ ಲಗ್ಗೆ ಇಡುವುದು ಖಚಿತ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಶ್ರೀಲಂಕಾ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದೆ. ಆ ಪೈಕಿ ಒಂದು ಪಂದ್ಯದ ಫಲಿತಾಂಶ ಅಂತಿಮ ಹಂತಕ್ಕೆ ಬಂದಿದ್ದು, ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಸನಿಹದಲ್ಲಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಸೋತರೆ ಫೈನಲ್​ ರೇಸ್​ನಲ್ಲಿ ಅದರ ಸ್ಥಾನ ಅಲುಗಾಡಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ಒಟ್ಟು ಮೂರು ಪಂದ್ಯಗಳನ್ನು ಆಡಬೇಕಿದೆ. ಆ ಪೈಕಿ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆಲುವಿನ ಹೊಸ್ತಿಲಲ್ಲಿದೆ. ಈ ಪಂದ್ಯ ಗೆದ್ದರೆ ದಕ್ಷಿಣ ಆಫ್ರಿಕಾ ಅಗ್ರಸ್ಥಾನಕ್ಕೇರಲಿದೆ. ಅದರ ನಂತರ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯ ಎರಡೂ ಪಂದ್ಯಗಳನ್ನು ಪಾಕಿಸ್ತಾನ ಗೆದ್ದರೆ ಭಾರತಕ್ಕೆ ಲಾಭವಾಗಲಿದೆ.

Source : https://tv9kannada.com/photo-gallery/cricket-photos/world-test-championship-india-final-chances-psr-946955-7.html

Leave a Reply

Your email address will not be published. Required fields are marked *