ಪರೀಕ್ಷಾ ದಿನಗಳಲ್ಲಿ ಮಕ್ಕಳ ಆಹಾರ ಕ್ರಮ ಹೇಗಿರಬೇಕು ? ಇಲ್ಲಿದೆ ತಜ್ಞರ ಸಲಹೆ.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳು ಪರೀಕ್ಷೆಗಳ ಅವಧಿ. ಶಾಲಾ ಕಾಲೇಜುಗಳಲ್ಲಿ ಇನ್ನೇನು ಪರೀಕ್ಷೆ ಆರಂಭವಾಗುವ ಸಮಯ ಬಂದೇ ಬಿಟ್ಟಿತು. ಆದರೆ, ಪರೀಕ್ಷೆ ಎಂದೊಡನೆ ಯಾರಿಗೇ ಆದರೂ ಒಂದು ಕ್ಷಣ ಆತಂಕವಾಗುವುದು ಸಹಜ. ಈ ಆತಂಕವನ್ನು ಬದಿಗಿಟ್ಟು ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಓದು ಎಷ್ಟು ಮುಖ್ಯವೋ ಆಹಾರ ಪದ್ಧತಿ ಕೂಡ ಅಷ್ಟೇ ಮುಖ್ಯ. ಹಾಗಾಗಿ ಆಹಾರ ಮತ್ತು ನಿದ್ರೆ ಬಗ್ಗೆ ಹೆಚ್ಚು ಗಮನ ಕೊಡಿ ಎನ್ನುತ್ತಾರೆ ತಜ್ಞರು.

10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡುತ್ತಿದ್ದಂತೆ ಆಹಾರ ಮತ್ತು ನಿದ್ರೆಯನ್ನು ನಿರ್ಲಕ್ಷಿಸುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ, ಮಕ್ಕಳು ಈ ಸಮಯದಲ್ಲಿ ಓದಿನಷ್ಟೇ ಆರೋಗ್ಯ ಮತ್ತು ಆಹಾರದ ಬಗ್ಗೆ ಬಹಳಷ್ಟು ಕಾಳಜಿ ವಹಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಗಮನ ಮತ್ತು ಕಾರ್ಯಕ್ಷಮತೆಯ ಮೇಲೆ ಇವೆರಡು ನೇರವಾಗಿ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಒತ್ತಡ ಮತ್ತು ಆಯಾಸ ಹೆಚ್ಚು ಕಾಡಬಹುದು. ಇವುಗಳಿಂದ ದೂರು ಇರಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾಥಿಗಳು ಆಹಾರ ಮತ್ತು ನಿದ್ರೆಯತ್ತ ಗಮನ ಕೊಡಬೇಕು. ಸೇವಿಸುವ ಆಹಾರ ಪದ್ಧತಿ ಕೂಡ ನಿಮ್ಮನ್ನು ಆರೋಗ್ಯವಾಗಿಡಬಲ್ಲದು. ಪ್ರತಿನಿತ್ಯ ಕನಿಷ್ಠವೆಂದರೂ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತು ಊಟ ಮಾಡುವುದನ್ನು ತಪ್ಪಿಸಿಕೊಳ್ಳಬಾರದು. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಅನಾರೋಗ್ಯ ಕಾಡಬಹುದು. ಪೌಷ್ಟಿಕಾಂಶರಹಿತ ಆಹಾರ ಸೇವಿಸಿದರೂ ಕಾಯಿಲೆ ಬೀಳಬಹುದು. ಹಾಗಾಗಿ ಈ ನಿರ್ಣಾಯಕ ಅವಧಿಯಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಸರಿಯಾದ ವಿಶ್ರಾಂತಿಯನ್ನು ಪಡೆಯುವುದು ತುಂಬಾ ಮುಖ್ಯ ಎನ್ನುತ್ತಾರೆ RIMS ಸಹಾಯಕ ಪ್ರಾಧ್ಯಾಪಕಿ ಮತ್ತು ಉಸ್ತುವಾರಿ ಆಹಾರ ತಜ್ಞೆ ಡಾ. ವಿಜಯಲಕ್ಷ್ಮಿ.

ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿರುವ ಅವರು, ವಿದ್ಯಾರ್ಥಿಗಳು ಈ ಆಹಾರ ಸಲಹೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.

1. ಸಮಯೋಚಿತ ಮತ್ತು ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಿ

  • ಬೆಳಗಿನ ಉಪಹಾರ : ಹಾಲು ಅಥವಾ ಹಣ್ಣು ಸೇವನೆ ಜೊತೆಗೆ ಇಡ್ಲಿ, ದೋಸೆ ಅಥವಾ ಉಪ್ಪಿಟ್ಟು ಅಂತಹ ಬೇಗ ಜೀರ್ಣವಾಗುವ ಅಥವಾ ಹಗುರವಾದ ಉಪಹಾರ ಸೇವಿಸಿ.
  • ಮಧ್ಯಾಹ್ನದ ಊಟ : ಅನ್ನ ಅಥವಾ ಚಪಾತಿ, ತರಕಾರಿ, ಸೊಪ್ಪು, ದಾಲ್, ಮೊಸರು ಮತ್ತು ಸಾಂಬಾರ್‌ನೊಂದಿಗೆ ಸಮತೋಲಿತ ಊಟ ಆರೋಗ್ಯಕ್ಕೆ ಸಹಕಾರಿ.
  • ಲಘು ಭೋಜನ : ರಾತ್ರಿಯಲ್ಲಿ ಭಾರವಾದ, ಜಿಡ್ಡಿನ ಆಹಾರವನ್ನು ತ್ಯಜಿಸಿದರೆ ಒಳ್ಳೆಯದು. ಚಪಾತಿ, ದಾಲ್ ಮತ್ತು ಸ್ವಲ್ಪ ತರಕಾರಿಗಳಂತಹ ಸರಳ ಊಟ ಮಾಡಿದರೆ ಒಳಿತು.

2. ಎಣ್ಣೆಯುಕ್ತ ಆಹಾರ ಮತ್ತು ಸಕ್ಕರೆ ಪಾನೀಯಗಳನ್ನು ತ್ಯಜಿಸಿ :

  • ಹುರಿದ ತಿಂಡಿ, ಚಿಪ್ಸ್, ಸಿಹಿತಿಂಡಿ ಮತ್ತು ಚಾಕೊಲೇಟ್​ಗಳಿಂದ ದೂರವಿರಿ. ಇವುಗಳು ಆಲಸ್ಯಕ್ಕೆ ಕಾರಣವಾಗಬಹುದು. ಏಕಾಗ್ರತೆ ಮೇಲೂ ಪರಿಣಾಮ ಬೀರಬಹುದು.
  • ಕಾಫಿ, ಚಹಾ ಮತ್ತು ತಂಪು ಪಾನೀಯಗಳಿಂದ ಸಾಧ್ಯವಾದಷ್ಟು ದೂರವಿರಿ. ಏಕೆಂದರೆ ಅವು ನಿದ್ರೆಗೆ ಅಡ್ಡಿಪಡಿಸಬಹುದು. ಜೊತೆಗೆ ನಿಮ್ಮ ಆತಂಕವನ್ನು ಹೆಚ್ಚಿಸಲೂಬಹುದು.

3. ಜಲಸಂಚಯನ ಮತ್ತು ಮೆದುಳಿನ ವರ್ಧಕಗಳು :

  • ದಿನವಿಡೀ ಸಾಧ್ಯವಾದಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚುತ್ತದೆ. ಇದರಿಂದ ನಿಮ್ಮ ಆರೋಗ್ಯ ಸ್ಥಿರವಾಗಿರುತ್ತದೆ.
  • ದೈನಂದಿನ ಆಹಾರದಲ್ಲಿ ಬಾದಾಮಿ, ವಾಲ್ನಟ್‌ಗಳಂತಹ ಹಣ್ಣು ಅಥವಾ ಒಣ ಹಣ್ಣು(Dry Fruits) ಸೇರಿಸಿ. ಇವು ಏಕಾಗ್ರತೆಯನ್ನು ಹೆಚ್ಚಿಸಿ ಆಯಾಸವನ್ನು ಕಡಿಮೆ ಮಾಡುತ್ತವೆ.

4. ನಿದ್ರೆ ಮತ್ತು ಒತ್ತಡವನ್ನು ನಿರ್ವಹಿಸುವುದು :

  • ರಾತ್ರಿ ಬೇಗ ಊಟ ಮಾಡಿ , ಉತ್ತಮವಾಗಿ ನಿದ್ರಿಸಿ : ಸರಿಯಾಗಿ ಜೀರ್ಣಕ್ರಿಯೆ ಆಗಬೇಕೆಂದರೆ ಮಲಗುವ ಸಮಯಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ಭೋಜನ ಮಾಡಿ. ಅತಿಯಾಗಿ ತಿನ್ನುವುದು ಅಸ್ವಸ್ಥತೆಗೆ ಕಾರಣವಾಗಬಹುದು ಮತ್ತು ನಿದ್ರೆಯನ್ನು ತೊಂದರೆಗೊಳಿಸಬಹುದು. ಹಾಗಾಗಿ ಮಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
  • ನಿದ್ರೆಯ ದಿನಚರಿಯನ್ನು ಅನುಸರಿಸಿ : ಯಾವುದೇ ಒತ್ತಡ ಇದ್ದರೂ ಪ್ರತಿ ರಾತ್ರಿ 7-8 ಗಂಟೆಗಳ ಕಾಲ ನಿದ್ರೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ನಿಮ್ಮ ಆರಾಮದಾಯಕ ನಿದ್ರೆಯು ನಿಮ್ಮ ಮೆದುಳನ್ನು ಉತ್ತಮವಾಗಿಡಲು ಮತ್ತು ಸ್ಮರಣಾ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಊಟದ ನಂತರ ತಕ್ಷಣ ಅಧ್ಯಯನ ಮಾಡಬೇಡಿ : ಊಟದ ನಂತರ ತಕ್ಷಣ ಓದಲು ಕೊಠಡಿಗೆ ತೆರಳಬೇಡ. ನಿದ್ದೆ ಬಂದು ಓದಿಗೆ ತೊಡಕಾಗಬಹುದು. ಹಾಗಾಗಿ 10 ನಿಮಿಷಗಳ ಕಾಲ ನಡೆದಾಡಿ. ಈ ನಡಿಗೆಯು ಅರೆನಿದ್ರಾವಸ್ಥೆಯನ್ನು ತಡೆಯುತ್ತದೆ. ಜೊತೆಗೆ ಓದುವ ಜೀರ್ಣಕ್ರಿಯೆಗೆ ಇದು ಸಹಾಯ ಕೂಡ ಆಗುತ್ತದೆ.

5. ಪರೀಕ್ಷಾ ದಿನದಂದು ಏನು ತಿನ್ನಬೇಕು ?

  • ಉಪಾಹಾರ : ಇಡ್ಲಿ, ದೋಸೆ, ಉಪ್ಪಿಟ್ಟು, ಹಣ್ಣುಗಳು ಮತ್ತು ಹಾಲಿನಂತಹ ಹಗುರವಾದ ಆಹಾರವನ್ನು ಆರಿಸಿ. ಅತಿಯಾದ ಆಹಾರ ಸೇವನೆಯಿಂದ ಅನಾವಶ್ಯಕವಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಬಹುದು. ಅಧಿಕ ಆಹಾರ ಸೇವನೆಯಿಂದ ನಿದ್ದೆ ಬರಬಹುದು. ಆದ್ದರಿಂದ ಹಿತಮಿತ ಆಹಾರ ಸೇವನೆ ಒಳ್ಳೆಯದು.
  • ಮಧ್ಯಾಹ್ನ ಊಟ : ತರಕಾರಿಗಳು, ಸೊಪ್ಪುಗಳು, ಮೊಸರು ಮತ್ತು ಸಾಂಬಾರ್‌ನೊಂದಿಗೆ ಅನ್ನ ಅಥವಾ ಚಪಾತಿಯೊಂದಿಗೆ ಸಮತೋಲಿತ ಊಟ ಸೇವಿಸಿ. ಒಟ್ಟಿಗೆ ತಿನ್ನುವ ಬದಲು ಪ್ರತಿ 3 ಗಂಟೆಗೊಮ್ಮೆ ಮಿತ ಆಹಾರ ಸೇವಿಸಿದರೆ ಓದಲು ಮನಸ್ಸಾಗುತ್ತದೆ. ಓದಿದ್ದು ಬಹುಬೇಗ ಅರ್ಥವಾಗುತ್ತದೆ ಎನ್ನುತ್ತಾರೆ ತಜ್ಞರು.
  • ರಾತ್ರಿ ಭೋಜನ : ಮಲಗುವ ಮುನ್ನ ಭಾರವಾದ ಊಟ ಮಾಡದಿರಿ. ಮಾಂಸದಂತ ಅತಿಯಾದ ಊಟ ಸವಿದರೆ ಪರೀಕ್ಷಾ ಸಮಯದಲ್ಲಿ ಅಡ್ಡ ಪರಿಣಾಮ ಬೀರಬಹುದು. ಹಾಗಾಗಿ ಅನ್ನ ಅಥವಾ ಚಪಾತಿಯೊಂದಿಗೆ ದಾಲ್ ಅನ್ನು ಸೇವಿಸಿ ಎನ್ನುತ್ತಾರೆ ಆಹಾರ ತಜ್ಞೆ ಡಾ. ವಿಜಯಲಕ್ಷ್ಮಿ.

ನಾವು ಸೇವಿಸುವ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಸಹ ಹಿತ ನೀಡುವಂತಿರಬೇಕು. ಸಮತೋಲಿತ ಆಹಾರ ಮತ್ತು ಸರಿಯಾದ ವಿಶ್ರಾಂತಿ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಬಲ್ಲದು. ಪರೀಕ್ಷೆ ವೇಳೆ ಊಟ, ನಿದ್ದೆ ಬಹುಮುಖ್ಯ. ಆತ್ಮವಿಶ್ವಾಸರಿಂದ ಪರೀಕ್ಷೆಗಳನ್ನು ಎದುರಿಸಿ. ಇದರಲ್ಲಿ ಯಾವುದೇ ಹೆಚ್ಚು – ಕಡಿಮೆಯಾದರೂ ಕೂಡ ಫಲಿತಾಂಶ ಋುಣಾತ್ಮಕವಾಗಿ ಬರಬಹುದು. ಆದ್ದರಿಂದ ಸಾಧ್ಯವಾದಷ್ಟು ಪೌಷ್ಟಿಕಾಂಶಯುಕ್ತ ಹಸಿ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡಿದರೆ ಉತ್ತಮ. ಜಂಕ್‌ ಫುಡ್​ ಬೇಡ. ಪರೀಕ್ಷೆಯ ಸಮಯದಲ್ಲಿ ಇದರಿಂದ ದೂರವಿರಿ. ಕಿವಿ ಹಣ್ಣು, ಬಾದಾಮಿ ಮುಂತಾದವುಗಳನ್ನು ಸೇವಿಸಿದರೆ ಬೆಸ್ಟ್‌ ಎನ್ನುತ್ತಾರೆ ಡಾ. ವಿಜಯಲಕ್ಷ್ಮಿ.

Source : https://www.etvbharat.com/kn/!health/exam-time-eat-smart-to-stay-sharp-says-rims-dietician-kas25022402024

Views: 1

Leave a Reply

Your email address will not be published. Required fields are marked *