HMPV Virus: ಚೀನಾದಲ್ಲಿ ಪತ್ತೆಯಾಗಿರುವ ಎಚ್ಎಂಪಿವಿ ರೋಗ ಲಕ್ಷಣಗಳು ಹರಡುವ ಅಪಾಯದ ಬಗ್ಗೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈ ಕುರಿತಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
- ಬೆಂಗಳೂರಿನಲ್ಲಿ ಎಂಟು ತಿಂಗಳ ಗಂಡು ಶಿಶು ಮತ್ತು ಮೂರು ತಿಂಗಳ ಹೆಣ್ಣು ಶಿಶುವಿನಲ್ಲಿ ಎಚ್ಎಂಪಿವಿ ವೈರಲ್ ಪತ್ತೆ
- ಬೆಂಗಳೂರಿನಲ್ಲಿ ಎಚ್ಎಂಪಿವಿ ವೈರಲ್ ಪತ್ತೆಯಾಗಿರುವ ಎರಡೂ ಶಿಶುಗಳು ಕೂಡ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಹಿನ್ನಲೆ ಹೊಂದಿಲ್ಲ
- ಎಚ್ಎಂಪಿವಿ ವೈರಲ್ ಬಗ್ಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗದರ್ಶಿ ಬಿಡುಗಡೆ

HMPV Virus in Bengaluru: ಚೀನಾದಲ್ಲಿ ಪತ್ತೆಯಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಹಾವಳಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ 8 ತಿಂಗಳ ಮಗುವಿನಲ್ಲಿ ಶಂಕಿತ ಎಚ್ಎಂಪಿವಿ ದೃಢ ಪಟ್ಟಿತ್ತು. ಇದೀಗ ಬ್ರಾಂಕೋನ್ಯೂಮೋನಿಯಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮೂರು ತಿಂಗಳ ಮಗುವಿನಲ್ಲೂ ಎಚ್ಎಂಪಿವಿ ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಎಚ್ಎಂಪಿವಿ ವೈರಲ್ ಪತ್ತೆಯಾಗಿರುವ ಎರಡೂ ಶಿಶುಗಳು ಕೂಡ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಹಿನ್ನಲೆ ಹೊಂದಿಲ್ಲದಿರುವುದು ಜನರ ಆಂತಂಕವನ್ನು ಇಮ್ಮಡಿಗೊಳಿಸಿದೆ.
ಮಗುವಿನಲ್ಲಿ ಹೆಚ್ಎಂಪಿವಿ ಪತ್ತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ವೈರೆಸ್ ಹೊಸದೇನಲ್ಲ. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಹೆಚ್ಎಂಪಿವಿ ವೈರಲ್ ಪತ್ತೆಯಾಗಿರುವ ಮಗು ಎಲ್ಲೂ ಓಡಾಡಿಲ್ಲ. ಇಮ್ಯೂನಿಟಿ ಕಡಿಮೆ ಇರುವ ಮಕ್ಕಳಲ್ಲಿ ಈ ವೈರಸ್ ಕಾಣಿಸಿಕೊಳ್ಳಬಹುದು. ಚೈನಾ ವೆರಿಯಂಟ್ ಗೂ ಇದಕ್ಕೂ ಸಂಬಂಧ ಇಲ್ಲ. ಮೂಟೆಷನ್ ಬಗ್ಗೆ ಗೊತ್ತಿಲ್ಲ. ಹೊಸ ವೈರಸ್ ಹರಡದಂತೆ ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡ್ತೇವೆ. ಇದು ಬಹಳ ವರ್ಷಗಳಿಂದ ಇದೆ, ಗಾಬರಿಪಡುವ ಅವಶ್ಯಕತೆ ಇಲ್ಲ. ಕೇಂದ್ರ, ಐಸಿಎಂಆರ್ ಅಭಿಪ್ರಾಯ ಪಡೆದು ಕ್ರಮದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
“ಎಚ್ಎಂಪಿವಿ ವೈರಸ್” ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ರಾಜ್ಯ ಆರೋಗ್ಯ ಇಲಾಖೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. Hmpv ವೈರೆಸ್ ಕುರತು ಯಾವುದೇ ಆತಂಕಕ್ಕೆ ಒಳಗಾಗದಂತೆ ಸಾರ್ವಜನಕರಿಗೆ ಮನವಿ ಮಾಡಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮುನ್ನೆಚ್ಚರಿಕಾ ಸಲಹೆಗಳಲ್ಲಿ ಮಕ್ಕಳು, ವಯಸ್ಕರು, ವೃದ್ದರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸೂಚನೆ ನೀಡಲಾಗಿದೆ…
ಏನು ಮಾಡಬೇಕು:-
* ಶೀತ, ನೆಗಡಿ, ಕೆಮ್ಮು ಇದ್ದರೆ ಕರವಸ್ತ್ರ ಅಥವಾ ಮಾಸ್ಕ್ ನಿಂದ ಮೂಗು, ಬಾಯಿಯನ್ನು ಮುಚ್ಚಿಕೊಳ್ಳಬೇಕು.
* ಆಗಾಗ್ಗೆ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಬೇಕು.
* ಹೆಚ್ಚಿನ ಜನರೊಂದಿಗೆ ಗುಂಪು ಸೇರಬಾರದು.
* ಜನದಟ್ಟಣೆ ಹೆಚ್ಚಾಗಿರುವ ಜಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು.
* ಹೆಚ್ಚು ನೀರು ಕುಡಿಯಬೇಕು ಮತ್ತು ಪೋಷಕಾಂಶಭರಿತ ಆಹಾರಗಳನ್ನು ಸೇವಿಸಬೇಕು.
ಏನು ಮಾಡಬಾರದು:-
>> ಬಳಸಿದ ಕರವಸ್ತ್ರವನ್ನೆ/ಮಾಸ್ಕ್ ಅನ್ನೇ ಬಳಸಬಾರದು.
>> ಶೀತ, ನೆಗಡಿ, ಕೆಮ್ಮು ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು.
>> ಸದಾ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು.
>> ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
>> ವೈದ್ಯರನ್ನು ಸಂಪರ್ಕಿಸದೇ ಸ್ವ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.