
ಎಫ್‌ಐಎಚ್ ಹಾಕಿ ವಿಶ್ವಕಪ್ (FIH Hockey World Cup) ಇಂದಿನಿಂದ ಒಡಿಶಾದಲ್ಲಿ ಆರಂಭವಾಗಲಿದೆ. ಬುಧವಾರ, ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಈ ವಿಶ್ವಕಪ್‌ನ ಉದ್ಘಾಟನಾ ಸಮಾರಂಭ ನಡೆದಿದ್ದು, ಇದರಲ್ಲಿ ಬಾಲಿವುಡ್ ಜಗತ್ತಿನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur), ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik), ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ಉಪಸ್ಥಿತರಿದ್ದರು. ಭಾರತದಲ್ಲಿ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಅಂದರೆ 2018ರಲ್ಲಿ ಹಾಕಿ ವಿಶ್ವಕಪ್ ಭಾರತದಲ್ಲಿಯೇ ನಡೆದಿತ್ತು. ಈ ವರ್ಷ ಒಟ್ಟು 16 ತಂಡಗಳು ಈ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ.
ಈ 16 ತಂಡಗಳನ್ನು ನಾಲ್ಕು ಪೂಲ್‌ಗಳಾಗಿ ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ ಪೂಲ್-ಎಯಲ್ಲಿವೆ. ಪೂಲ್ ಬಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ ತಂಡಗಳನ್ನು ಒಳಗೊಂಡಿದೆ. ನೆದರ್ಲೆಂಡ್ಸ್, ಚಿಲಿ, ಮಲೇಷ್ಯಾ, ನ್ಯೂಜಿಲೆಂಡ್ ತಂಡಗಳು ಪೂಲ್-ಸಿಯಲ್ಲಿ ಸ್ಥಾನ ಪಡೆದಿವೆ. ಭಾರತವು ವೇಲ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ ಜೊತೆಗೆ ಡಿ ಪೂಲ್‌ನಲ್ಲಿ ಸ್ಥಾನ ಪಡೆದಿದೆ.
Hockey World Cup2023: ಅಬ್ಬಬ್ಬಾ,, ಇಷ್ಟೊಂದಾ! ಹಾಕಿ ವಿಶ್ವಕಪ್‌ನ ಬಜೆಟ್ ಎಷ್ಟು ಸಾವಿರ ಕೋಟಿ ಗೊತ್ತಾ?
ಇದು ಮೊದಲ ದಿನದ ವೇಳಾಪಟ್ಟಿ
ಮೊದಲ ದಿನ ಅಂದರೆ ಜನವರಿ 13 ರಂದು ನಾಲ್ಕು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯವು ಗ್ರೂಪ್-ಎ ಆಗಿದ್ದು, ಅರ್ಜೆಂಟೀನಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಅದೇ ಗುಂಪಿನ ಇನ್ನೆರಡು ತಂಡಗಳು ಸೆಣಸಲಿವೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ, ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮೊದಲ ಬಾರಿಗೆ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಇಂಗ್ಲೆಂಡ್‌ನ ಮುಂದೆ ವೇಲ್ಸ್ ತಂಡ ಸೆಣಸಾಡಲಿದೆ. ಇದರ ನಂತರ ದಿನದ ಕೊನೆಯ ಪಂದ್ಯದಲ್ಲಿ ಭಾರತ, ಸ್ಪೇನ್ ತಂಡವನ್ನು ಎದುರಿಸಲಿದೆ.
ಈ ವಿಶ್ವಕಪ್‌ನಲ್ಲಿ ಒಟ್ಟು 44 ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಎರಡು ಸ್ಥಳಗಳಲ್ಲಿ ನಡೆಯಲಿವೆ. ರೂರ್ಕೆಲಾದ ಬಿರ್ಸಾ ಮುಂಡಾ ಮತ್ತು ಭುವನೇಶ್ವರದ ಕಳಿಂಗ ಸ್ಟೇಡಿಯಂ ಈ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಪ್ರತಿ ಗುಂಪಿನಲ್ಲಿರುವ ಪ್ರತಿ ತಂಡವು ಮೂರು ಪಂದ್ಯಗಳನ್ನು ಆಡುತ್ತದೆ. ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ತಲುಪಲಿದ್ದು, ನಂತರ ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಕ್ರಾಸ್ ಓವರ್ ಪಂದ್ಯವನ್ನು ಆಡಲಿದ್ದು, ವಿಜೇತ ತಂಡ ಮುಂದಿನ ಸುತ್ತಿಗೆ ತೆರಳಲಿದೆ. ಕ್ವಾರ್ಟರ್‌ಫೈನಲ್‌ನಿಂದ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಆಡುತ್ತವೆ. ನಂತರ ಇಲ್ಲಿ ಗೆಲ್ಲುವ ಎರಡು ತಂಡಗಳು ಜನವರಿ 29 ರಂದು ಫೈನಲ್‌ನಲ್ಲಿ ಆಡಲಿವೆ.
ಈ ಬಾರಿಯಾದರೂ ಕೊನೆಯಾಗುತ್ತಾ ವಿಶ್ವಕಪ್ ಬರ
ಭಾರತ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ ಆದರೆ ಹಾಕಿ ವಿಶ್ವಕಪ್‌ನಲ್ಲಿ ತಂಡ ಹೆಚ್ಚು ಯಶಸ್ವಿಯಾಗಲಿಲ್ಲ. ಭಾರತ ಇದುವರೆಗೆ ಒಮ್ಮೆ ಮಾತ್ರ ಹಾಕಿ ವಿಶ್ವಕಪ್ ಗೆದ್ದಿದೆ. 1975 ರಲ್ಲಿ ಕೊನೆಯ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದ ಭಾರತ ಅಂದಿನಿಂದ ಇಲ್ಲಿಯವರೆಗೆ ತನ್ನ ಎರಡನೇ ಪ್ರಶಸ್ತಿ ಗೆಲುವಿಗಾಗಿ ಕಾಯುತ್ತಿದೆ. ತವರಿನಲ್ಲಿ ಈ ಬರವನ್ನು ಕೊನೆಗಾಣಿಸಲು ಟೀಂ ಇಂಡಿಯಾ ಹೋರಾಡಲಿದೆ.
ಅದ್ದೂರಿಯಾಗಿ ಆಯೋಜನೆ
ಒಡಿಶಾ ಸರ್ಕಾರ ಈ ಬಾರಿಯ ವಿಶ್ವಕಪ್‌ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಮಾಧ್ಯಮಗಳ ವರದಿ ಪ್ರಕಾರ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 1098 ಕೋಟಿ ರೂ. ಎತ್ತಿಡಲಾಗಿದೆ. ಒಡಿಶಾ ಸರ್ಕಾರ ಈ ಬಾರಿಯ ವಿಶ್ವಕಪ್‌ಗಾಗಿಯೇ ರೂರ್ಕೆಲಾದಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಿದೆ. ಈ ಕ್ರೀಡಾಂಗಣವನ್ನು ನಿರ್ಮಿಸಲು 875.78 ಕೋಟಿ ರೂ. ವ್ಯಯಿಸಲಾಗಿದೆ. ಇದಲ್ಲದೇ, ಭಾಗವಹಿಸುವ ತಂಡಗಳು, ಆಟಗಾರರು, ಕೋಚಿಂಗ್ ಸಿಬ್ಬಂದಿ, ಟೂರ್ನಿಯಲ್ಲಿ ಕೆಲಸ ಮಾಡುವ ಇತರ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಸೇರಿಸಿದರೆ ಒಟ್ಟು 84 ಕೋಟಿ ರೂ. ಖರ್ಚಾಗುತ್ತಿದೆ. ಇದಲ್ಲದೇ ಜಾಹೀರಾತಾಗಲಿ, ಬ್ರ್ಯಾಂಡಿಂಗ್ ಆಗಲಿ ಇನ್ನೂ ಹಲವು ವಿಷಯಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ