‘ಮ್ಯಾಕ್ಸ್’ ಸಿನಿಮಾದಲ್ಲಿ ಹೇಗಿದೆ ಮಂಜು-ಸುದೀಪ್ ಮುಖಾಮುಖಿ? ಹೊಸ ಝಲಕ್ ರಿಲೀಸ್

ಕಿಚ್ಚ ಸುದೀಪ್ ಅವರ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಹೀಗಿರುವಾಗಲೇ ಸಿನಿಮಾಗೆ ಪ್ರಚಾರ ನೀಡುವ ಕೆಲಸ ಕೂಡ ಜೋರಾಗಿದೆ. ಸುದೀಪ್ ಅಭಿಮಾನಿಗಳು ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ‘ಉಗ್ರಂ’ ಮಂಜು ಅವರು ನಟಿಸಿದ್ದು, ಈ ಸಿನಿಮಾದ ಝಲಕ್ ರಿಲೀಸ್ ಮಾಡಲಾಗಿದೆ. ತೆರೆಮೇಲೆ ಮಂಜು ಹಾಗೂ ಸುದೀಪ್ ಪರಸ್ಪರ ಮುಖಾಮುಖಿ ಆಗುವ ಸಾಧ್ಯತೆ ದಟ್ಟವಾಗಿದೆ.

ಉಗ್ರಂ ಮಂಜು ಹಾಗೂ ಸುದೀಪ್ ಮಧ್ಯೆ ಹಲವು ವರ್ಷಗಳ ಪರಿಚಯ ಇದೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಮಂಜು ಸದಾ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಅವರ ಪಾತ್ರ ನೋಡಿದ ಅನೇಕರಿಗೆ ಇವರು ಮಾಡಿರೋದು ನೆಗೆಟಿವ್ ಶೇಡ್​ ಇರುವ ಪೊಲೀಸ್ ಪಾತ್ರ ಎಂಬ ಸೂಚನೆ ಸಿಕ್ಕಿದೆ.

‘ನಿಮ್ಮ ಸಾಹೇಬ್ರು ನಾಳೆ ತಾನೆ ಡ್ಯೂಟಿಗೆ ಜಾಯಿನ್ ಆಗೋದು. ಇವತ್ ಯಾಕೆ ಇಷ್ಟೆಲ್ಲ ಬಿಲ್ಡಪ್’ ಎಂದು ಉಗ್ರಂ ಮಂಜು ಪೊಲೀಸ್ ಪೇದೆ ಬಳಿ ಕೇಳುತ್ತಾರೆ. ಈ ರೀತಿಯಲ್ಲಿ ದೃಶ್ಯ ಇದೆ. ಆ ಬಳಿಕ ಸುದೀಪ್ ಅವರು ಮಾಸ್ ಆಗಿ ಕೆಲವು ಫೈಟ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಶೀಘ್ರವೇ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.

‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಸುದೀಪ್ ಜೊತೆ ವರಲಕ್ಷ್ಮಿ ಶರತ್​ಕುಮಾರ್, ಸಂಯುಕ್ತ ಹೊರನಾಡು, ಸುಕ್ರತಾ ವಾಘ್ಲೆ ಮೊದಲಾದವರು ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಲೈಪುಲಿ ಧಾನು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ. ಆ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

Source : https://tv9kannada.com/entertainment/sandalwood/max-movie-new-glimpse-viral-ugram-manju-and-sudeep-face-to-face-in-max-sneek-peek-rmd-946063.html

Leave a Reply

Your email address will not be published. Required fields are marked *