ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅತ್ಯುತ್ತಮ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತೀಯರದ್ದೇ ಸಿಂಹಪಾಲು.

ಫೆಬ್ರವರಿ 19 ರಿಂದ ಆರಂಭವಾಗಿದ್ದ ಚಾಂಪಿಯನ್ಸ್ ಟ್ರೋಫಿಗೆ (Champions Trophy 2025) ಮಾರ್ಚ್​ 9 ರಂದು ಅದ್ಧೂರಿ ತೆರೆಬಿದ್ದಿದೆ. 8 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ಭಾರತ ಅಜೇಯ ತಂಡವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ವಶಪಡಿಸಿಕೊಂಡಿತು. ತಂಡದ ಈ ಅಜೇಯ ಓಟಕ್ಕೆ ಪ್ರಮುಖ ಕಾರಣವೇ ಅದರ ಸಾಂಘಿಕ ಪ್ರದರ್ಶನ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮತ್ತು ಫಿಲ್ಡಿಂಗ್ ಮೂರು ವಿಭಾಗಗಳಲ್ಲೂ ರೋಹಿತ್ ಪಡೆ ಚಾಂಪಿಯನ್ ಆಟ ಆಡಿತು. ಇದೀಗ ಅದರ ಪರಿಣಾಮವೆಂಬಂತೆ ಐಸಿಸಿ (ICC) ಪ್ರಕಟಿಸಿರುವ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ 6 ಆಟಗಾರರು ಟೀಂ ಇಂಡಿಯಾದಿಂದ ಆಯ್ಕೆಯಾಗಿದ್ದಾರೆ.

ಯಾವ ದೇಶದಿಂದ ಎಷ್ಟು ಜನ?

ಫೆಬ್ರವರಿ 10 ರಂದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಇಡೀ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸಿಕ್ಕಿದೆ. ತಂಡದ ನಾಯಕತ್ವವನ್ನು ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್​ಗೆ ವಹಿಸಿಕೊಡಲಾಗಿದೆ. ಇನ್ನು ಆಯ್ಕೆಯಾಗಿರುವ 12 ಆಟಗಾರರಲ್ಲಿ ಯಾರ್ಯಾರು ಯಾವ್ಯಾವ ದೇಶದಿಂದ ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ.. ಅಫ್ಘಾನಿಸ್ತಾನ ತಂಡದಿಂದ ಇಬ್ಬರು, ನ್ಯೂಜಿಲೆಂಡ್ ತಂಡದಿಂದ ನಾಲ್ವರು ಆಟಗಾರರು ಆಯ್ಕೆಯಾಗಿದ್ದಾರೆ. ಉಳಿದಂತೆ ಚಾಂಪಿಯನ್ ಟೀಂ ಇಂಡಿಯಾದಿಂದ 6 ಆಟಗಾರರು ಆಯ್ಕೆಯಾಗಿದ್ದಾರೆ.

https://twitter.com/ICC/status/1899105581665075228

ರೋಹಿತ್​ಗೆ ಸ್ಥಾನ ಸಿಗಲಿಲ್ಲ

ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ರೋಹಿತ್ ಶರ್ಮಾಗೆ ಮಾತ್ರ ಸ್ಥಾನ ಸಿಕ್ಕಿಲ್ಲ. ಏಕೆಂದರೆ ಐಸಿಸಿ, ರಚಿನ್ ರವೀಂದ್ರ ಮತ್ತು ಇಬ್ರಾಹಿಂ ಜದ್ರಾನ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಐಸಿಸಿ ತನ್ನ ಅತ್ಯುತ್ತಮ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಸೇರಿಸದೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮಧ್ಯಮ ಕ್ರಮಾಂಕದಲ್ಲಿ ಐಸಿಸಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಗ್ಲೆನ್ ಫಿಲಿಪ್ಸ್ ಅವರಿಗೆ ಸ್ಥಾನ ನೀಡಿದೆ. ಈ ಆಟಗಾರರು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅಯ್ಯರ್ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದು, ಅವರು ಆಡಿದ 5 ಪಂದ್ಯಗಳಲ್ಲಿ 243 ರನ್ ಕಲೆಹಾಕಿದರು. ಇವರಲ್ಲದೆ, ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ ಜತೆಗೆ ಅದ್ಭುತ ಫೀಲ್ಡಿಂಗ್ ಮಾಡುವ ಮೂಲಕವೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಬೌಲಿಂಗ್ ವಿಭಾಗದಲ್ಲಿ ಯಾರು?

ಸ್ಪಿನ್ ಬೌಲರ್‌ಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ, 12 ನೇ ಆಟಗಾರನಾಗಿ ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಕ್ಕಿದೆ. ವರುಣ್ ಚಕ್ರವರ್ತಿ ಕೂಡ 3 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದರು. ಉಳಿದಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ಮ್ಯಾಟ್ ಹೆನ್ರಿಗೆ ಅವಕಾಶ ಸಿಕ್ಕಿದೆ.

ಐಸಿಸಿ ಆಯ್ಕೆ ಮಾಡಿದ ಚಾಂಪಿಯನ್ಸ್ ಟ್ರೋಫಿ ತಂಡ: ರಚಿನ್ ರವೀಂದ್ರ, ಇಬ್ರಾಹಿಂ ಜದ್ರಾನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಗ್ಲೆನ್ ಫಿಲಿಪ್ಸ್, ಅಜ್ಮತುಲ್ಲಾ ಉಮರ್ಜೈ, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೊಹಮ್ಮದ್ ಶಮಿ, ಮ್ಯಾಟ್ ಹೆನ್ರಿ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್.

Source : https://tv9kannada.com/sports/cricket-news/champions-trophy-2025-icc-announced-team-of-the-tournament-psr-989540.html

Leave a Reply

Your email address will not be published. Required fields are marked *