ಬದಲಾಗುತ್ತಿರುವ ಹವಾಮಾನ ಹಿನ್ನಲೆಯಲ್ಲಿ ಪದೇ ಪದೇ ಈಗ ವೈರಲ್ ಫೀವರ್ ಕಂಡುತ್ತಿದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಜ್ವರ ಮತ್ತೆ ಕಾಡುತ್ತಿದೆ. ಒಬ್ಬರಿಗೆ ಬಂದ ಜ್ವರ ಮನೆ ಮಂದಿಗೆಲ್ಲಾ ಹರಡುತ್ತಿದೆ. ಅದರಲ್ಲೂ ಬಿಸಿಲು ಹಾಗೂ ಮಳೆ ಬರುವ ಕಾಲದಲ್ಲಿ ಈ ರೀತಿಯ ವೈರಲ್ ಫೀವರ್ ಹೆಚ್ಚಾಗುತ್ತದೆ.ಅದರ ಜೊತೆಗೆ ಶೀರ, ತಲೆನೋವು, ಗಂಟಲು ಸಾಮಾನ್ಯ ಲಕ್ಷಣಗಳಾಗಿವೆ.

ನೋಯುತ್ತಿರುವ ಗಂಟಲು ಅಹಿತಕರ ಮತ್ತು ಕಿರಿಕಿರಿ ಉಂಟುಮಾಡುತ್ತದೆ, ಜ್ವರ ಬಂದಾಗ ಸಾಮಾನ್ಯವಾಗಿ ಈ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ವೈರಲ್ ಫೀವರ್‌ನ ಪ್ರಮುಖ ಲಕ್ಷಣದಲ್ಲಿ ಗಂಟಲು ನೋವು ಸಹ ಒಂದು. ಹಾಗೆ ಶೀತ ಗಾಳಿಯ ಪರಿಣಾಮವಾಗಿ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಬಹುತೇಕರಲ್ಲಿ ಗಂಟಲು ನೋವು ಕಾಣಿಸಿಕೊಂಡ ಒಂದೆರಡು ದಿನದ ಬಳಿಕ ಜ್ವರ ಕಾಣಿಸಿಕೊಳ್ಳುತ್ತದೆ.
ಹಾಗಾದ್ರೆ ನಾವಿಂದು ಈ ಗಂಟಲು ನೋವಿಗೆ ಮನೆ ಮದ್ದು ಏನು ಎಂಬುದನ್ನು ತಿಳಿದುಕೊಳ್ಳೋಣ. ಗಂಟಲು ನೋವು ಬಂದಾಗ ಮನೆಯಲ್ಲೇ ಅದಕ್ಕೆ ಯಾವ ಔಷಧಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ಹೇಳುತ್ತೇವೆ ನೋಡಿ.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
ಗಂಟು ನೋವು ಬಂದಾಗ ಈ ಸರಳ ಮನೆಮದ್ದು ಟ್ರೈ ಮಾಡಿ. ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಉಪ್ಪುನೀರು ಊತವನ್ನು ಕಡಿಮೆ ಮಾಡಲು, ಲೋಳೆಯ ಸಡಿಲಗೊಳಿಸಲು ಮತ್ತು ಕಿರಿಕಿರಿಯುಂಟುಮಾಡುವ ಅಥವಾ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀಚಮಚ ಉಪ್ಪನ್ನು ಹಾಕಿ ದಿನಕ್ಕೆ ಎರಡು ಹೊತ್ತು ಮಾಡಬೇಕು. ಹೀಗೆ ಮಾಡಿದರೆ ಗಂಟಲು ನೋವು ನಿವಾರಣೆಯಾಗಲಿದೆ.
ಜೇನುತುಪ್ಪ
ಜೇನುತುಪ್ಪ ಆಯುರ್ವೇದ ಔಷಧಿಗಳಿಗೆ ಪ್ರಖ್ಯಾತಿ ಪಡೆದಿದೆ. ಕೆಮ್ಮು, ಗಂಟಲು ನೋವಿಗೆ ಇದು ಸಿದ್ಧೌಷಧ. ಮಕ್ಕಳ ಅದೆಷ್ಟೋ ಕೆಮ್ಮಿನ ಸಿರಪ್‌ಗಳಲ್ಲಿ ಜೇನುತುಪ್ಪದ ಅಂಶ ಇದ್ದೇ ಇರುತ್ತದೆ. ಜೇನುತುಪ್ಪದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಗಂಟಲಿನ ಹೊದಿಕೆ, ನೋವು ಮತ್ತು ಕಿರಿಕಿರಿಯಿಂದ ಪರಿಹಾರವನ್ನು ನೀಡುತ್ತದೆ. ಗಂಟಲು ನೋವು ಇದ್ದಾಗ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನು ತುಪ್ಪ ಹಾಕಿ. ಬಳಿಕ ಈ ನೀರನ್ನು ಕುಡಿಯಿರಿ. ದಿನಕ್ಕೆ 2 ಬಾರಿ ಕುಡಿದು ನೋಡಿ.
ಶುಂಠಿ ಟೀ
ಶುಂಠಿಯಲ್ಲಿ ಉರಿಯೂತ ಹಾಗೂ ಬ್ಯಾಕ್ಟಿರಿಯಾ ನಿವಾರಣ ಗುಣ ಹೊಂದಿರುವುದರಿಂದ ಗಂಟಲು ನೋವನ್ನು ಕಡಿಮೆ ಮಾಡಲಿದೆ. ಶುಂಠಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಸಾಮಾನ್ಯ ಟೀ ಮಾಡುವಂತೆಯೇ ಮಾಡಿ ಆದರೆ ಅದಕ್ಕೆ ಶುಂಠಿ ಬೆರೆಸಿದರೆ ಔಷಧಿ ಗುಣವುಳ್ಳ ಟೀ ರೆಡಿಯಾಗುತ್ತದೆ.
ಪುದೀನಾ ಟೀ
ಪುದೀನಾ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಗಂಟಲು ನೋವು ಮತ್ತು ಉಸಿರಾಟದ ಸೋಂಕುಗಳಿಗೆ ಸಂಬಂಧಿಸಿದ ಇತರ ರೋಗಲಕ್ಷಣಗಳನ್ನು ನಿವಾರಿಸಲು ಮೆಂಥಾಲ್ ಒಳಗೊಂಡಿರುವ ಈ ಪುದೀನಾ ಸಹಕಾರಿಯಾಗಿದೆ. ಸಾಮಾನ್ಯ ಟೀ ಮಾಡಿದಂತೆಯೇ ಮಾಡಿ ಒಂದೆರಡು ಪುದೀನಾ ಎಲೆಗಳ ಅದಕ್ಕೆ ಹಾಕಿ ಶೋಧಿಸಿ ಕುಡಿಯಬಹುದು. ಇದರಿಂದ ಗಂಟಲು ನೋವು ನಿವಾರಣೆಯಾಗಲಿದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ . ಬೆಳ್ಳುಳ್ಳಿಯ ಎಸಳನ್ನು ಪುಡಿಮಾಡಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಅಥವಾ ಬೆಚ್ಚಗಿನ ನೀರಿಗೆ ಸೇರಿಸಿ. ಬೆಳ್ಳುಳ್ಳಿ ಟೀ ಕುಡಿಯುವುದರಿಂದಲೂ ಪರಿಹಾರ ಪಡೆಯಬಹುದು. ಗಂಟಲು ನೋವಿಗೆ ಇದು ತಕ್ಷಣ ಪರಿಹಾರ ನೀಡಲಿದೆ.