IND vs AUS: ಆಸೀಸ್ ದಾಳಿಗೆ ಕಂಗಾಲಾದ ರೋಹಿತ್ ಪಡೆ; 117 ರನ್​ಗಳಿಗೆ ಆಲೌಟ್!

india vs australia 2nd odi India 117 all out Mitchell Starc picks up five wickets

ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (India Vs Australia) ಕೇವಲ 117 ರನ್‌ಗಳಿಗೆ ಆಲೌಟ್ ಆಗಿದೆ. ಆಸೀಸ್ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾಕ್ಕೆ 26 ಓವರ್​ ಕೂಡ ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ (Steve Smith) ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಹಿತ್ (Rohit Sharma) ಪಡೆಗೆ ಒಂದೇ ಒಂದು ಉತ್ತಮ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ (Virat Kohli) ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್​ಗೂ 30 ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಕ್ಷರ್ ಪಟೇಲ್ (Akshar Patel) ಹೋರಾಟ ನಡೆಸಿದರಾದರೂ, ಅವರಿಗೆ ಯಾರಿಂದಲೂ ಸಾಥ್ ಸಿಗಲಿಲ್ಲ.

ಕೇವಲ 117 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ತವರಿನಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಅದೇ ಸಮಯದಲ್ಲಿ, ಇದು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಮೂರನೇ ಅತಿ ಕಡಿಮೆ ಸ್ಕೋರ್ ಕೂಡ ಆಗಿದೆ. ಮುಂಬೈನಲ್ಲೂ ಇದೇ ರೀತಿಯ ಪ್ರದರ್ಶನ ನೀಡಿದ್ದ ಭಾರತ ಸೋಲಿನ ಸುಳಿಗೆ ಸಿಲುಕ್ಕಿತ್ತು. ಆದರೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ನಡುವಿನ ಶತಕದ ಜೊತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತ್ತು. ಆದರೆ ವಿಶಾಖಪಟ್ಟಣದಲ್ಲಿ ಅಂತಹ ಯಾವುದೇ ಪಾಲುದಾರಿಕೆ ಕಂಡುಬರಲಿಲ್ಲ.

IND vs AUS 2nd ODI Live Score: ಆಸೀಸ್ ದಾಳಿಗೆ ತತ್ತರಿಸಿದ ಭಾರತ; 117 ರನ್​ಗಳಿಗೆ ಆಲೌಟ್

ಟಾಪ್ ಆರ್ಡರ್ ವಿಫಲ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ  ಮೊದಲ ಓವರ್​ನಲ್ಲೇ ಆಘಾತ ಎದುರಿಸಿತು. ಆರಂಭಿಕ ಗಿಲ್, ಖಾತೆ ತೆರೆಯಲೂ ಸಾಧ್ಯವಾಗದೆ ಮಿಚೆಲ್ ಸ್ಟಾರ್ಕ್​ಗೆ ಬಲಿಯಾದರು. ಇದರ ನಂತರ, ಐದನೇ ಓವರ್‌ನಲ್ಲಿ ಸ್ಟಾರ್ಕ್ ರೋಹಿತ್ ಶರ್ಮಾ ಮತ್ತು ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಒಂದರ ನಂತರ ಒಂದರಂತೆ ಎರಡು ಎಸೆತಗಳಲ್ಲಿ ಔಟ್ ಮಾಡಿದರು. ನಾಲ್ಕು ಓವರ್‌ಗಳ ನಂತರ ಕೆಎಲ್ ರಾಹುಲ್ ಕೂಡ 9 ರನ್ ಗಳಿಸಿ ಸ್ಟಾರ್ಕ್‌ಗೆ ಬಲಿಯಾದರು. 2019 ರ ವಿಶ್ವಕಪ್ ಸೆಮಿಫೈನಲ್ ನಂತರ ಟೀಮ್ ಇಂಡಿಯಾ ಏಕದಿನ ಮಾದರಿಯಲ್ಲಿ ಪವರ್‌ಪ್ಲೇಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು.

ಅಕ್ಷರ್ ಪಟೇಲ್​ಗೆ ಯಾರ ಬೆಂಬಲವೂ ಸಿಗಲಿಲ್ಲ

ರಾಹುಲ್ ವಿಕೆಟ್ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೂಡ ಹೆಚ್ಚು ಹೊತ್ತು ನಿಲ್ಲಲ್ಲಿಲ್ಲ. ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಪಾಂಡ್ಯ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್  ದಾರಿ ಹಿಡಿದರು. ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಭಾರತ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು, ಆದರೆ ನಾಥನ್ ಎಲ್ಲಿಸ್ ಇದಕ್ಕೆ ಅವಕಾಶ ನೀಡಲಿಲ್ಲ. ಮೊದಲು ವಿರಾಟ್ ಕೊಹ್ಲಿ (31 ರನ್) ಯನ್ನು ಔಟ್ ಮಾಡಿದ ಎಲ್ಲಿಸ್, ನಂತರ ರವೀಂದ್ರ ಜಡೇಜಾ (16 ರನ್) ಅವರನ್ನು ಔಟ್ ಮಾಡಿದರು. ಅಕ್ಷರ್ ಪಟೇಲ್ ಒಂದು ತುದಿಯಲ್ಲಿ ನಿಂತು 29 ರನ್ ಗಳಿಸಿ, ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಯಾವುದೇ ಆಟಗಾರನಿಂದ ಬೆಂಬಲ ಸಿಗಲಿಲ್ಲ. ನಾಲ್ಕು ರನ್ ಗಳಿಸಿ ಕುಲ್ದೀಪ್ ಔಟಾದರೆ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಟೀಂ ಇಂಡಿಯಾ ಕೇವಲ 26 ಓವರ್‌ಗಳಿಗೆ ಇನ್ನಿಂಗ್ಸ್​ ಮುಗಿಸಿತು. ಇತ್ತ ಆತಿಥೇಯರನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾಕ್ಕೆ ಕೇವಲ ಎರಡು ಗಂಟೆ 20 ನಿಮಿಷಗಳು ಬೇಕಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/india-vs-australia-2nd-odi-india-117-all-out-mitchell-starc-picks-up-five-wickets-psr-au14-539201.html

Leave a Reply

Your email address will not be published. Required fields are marked *