IND vs NZ: ಬರೋಬ್ಬರಿ 1100 ದಿನಗಳ ಬಳಿಕ ಶತಕದ ಬರ ನೀಗಿಸಿಕೊಂಡ ರೋಹಿತ್ ಶರ್ಮಾ..!

IND vs NZ rohit sharma scored hundred in the 3rd odi against new zealand in indore holkar stadium

ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬರೋಬ್ಬರಿ 1100 ದಿನಗಳ ಬಳಿಕ ಏಕದಿನದಲ್ಲಿ ಶತಕ ಸಿಡಿಸಿದ್ದಾರೆ. ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ (India Vs New Zealand) ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ತಮ್ಮ ವೃತ್ತಿ ಜೀವನದ 30ನೇ ಏಕದಿನ ಶತಕ ಸಿಡಿಸಿದರು. ಬಹಳ ದಿನಗಳಿಂದ ರನ್‌ಗಾಗಿ ಪರದಾಡುತ್ತಿದ್ದ ರೋಹಿತ್, ಇಂದೋರ್‌ ಮೈದಾನದಲ್ಲಿ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಕಾಕತಾಳೀಯವೆಂಬಂತೆ ರೋಹಿತ್ ಇದೇ ಮೈದಾನದಲ್ಲಿ ಟಿ20ಯಲ್ಲಿ ಶತಕ ಸಿಡಿಸಿದ್ದರು. ಒಂದೂವರೆ ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಬಾರಿಸಿದ ಮೊದಲ ಶತಕ ಇದಾಗಿದೆ. ಈ ಮೊದಲು ಸೆಪ್ಟೆಂಬರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ್ದ ರೋಹಿತ್ ಅಂದಿನಿಂದ ಆಡಿರುವ 54 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕ ಸಿಡಿಸಿರಲಿಲ್ಲ. ತಮ್ಮ ಅಬ್ಬರದ ಇನ್ನಿಂಗ್ಸ್​ನಲ್ಲಿ ಕೇವಲ 85 ಎಸೆತಗನ್ನು ಎದುರಿಸಿದ ರೋಹಿತ್ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 101 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.

2020ರ ಜನವರಿ 19 ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಏಕದಿನ ಶತಕವನ್ನು ಸಿಡಿಸಿದ್ದ ರೋಹಿತ್, ಇವತ್ತಿನ ಏಕದಿನ ಶತಕದೊಂದಿಗೆ ತಮ್ಮ ಏಕದಿನ ವೃತ್ತಿಜೀವನದ 30ನೇ ಶತಕಗಳನ್ನು ಪೂರ್ಣಗೊಳಿಸಿದ್ದಾರೆ.

IND vs NZ: ಕೇವಲ 9 ದಿನಗಳಲ್ಲಿ ಮೂರನೇ ಶತಕ ಬಾರಿಸಿದ ಶುಭ್​ಮನ್ ಗಿಲ್..!

ಪಾಂಟಿಂಗ್‌ ದಾಖಲೆ ಸರಿಗಟ್ಟಿದ ರೋಹಿತ್

ಕಳೆದೆರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದ ರೋಹಿತ್ ಅವರ ಮೇಲೆ ಇತ್ತೀಚಿಗೆ ಪ್ರಶ್ನೆಗಳು ಎದ್ದಿದ್ದವು. ಅದರಲ್ಲೂ ಸೀಮಿತ ಓವರ್​ಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲವಾಗಿದ್ದ ರೋಹಿತ್​ರನ್ನು ಏಕದಿನ ತಂಡದಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ತನ್ನ ಬ್ಯಾಟ್​ಗೆ ಆಗಸದ ದರ್ಶನ ಮಾಡಿಸಿರುವ ರೋಹಿತ್ ಟೀಕಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿದ ರೋಹಿತ್ ತಮ್ಮ ಏಕದಿನ ವೃತ್ತಿಜೀವನದ ಎರಡನೇ ವೇಗದ ಶತಕವನ್ನು ಸಿಡಿಸಿದ ದಾಖಲೆಯನ್ನೂ ಬರೆದಿದ್ದಾರೆ. ಇದಕ್ಕೂ ಮುನ್ನ 2018ರಲ್ಲಿ ಇಂಗ್ಲೆಂಡ್ ವಿರುದ್ಧ 82 ಎಸೆತಗಳಲ್ಲಿ ಶತಕ ಸಿಡಿಸಿದ್ದು, ರೋಹಿತ್ ಅವರ ಅತಿ ವೇಗದ ಶತಕವಾಗಿದೆ. ಈ ಶತಕದೊಂದಿಗೆ ರೋಹಿತ್ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದ್ದಾರೆ. ಇಬ್ಬರೂ ಈಗ ಏಕದಿನದಲ್ಲಿ ತಲಾ 30 ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ.

ಖಾಯಂ ನಾಯಕನಾದ ಬಳಿಕ ಮೊದಲ ಶತಕ

ಅಲ್ಲದೆ ಗಿಲ್ ಅವರೊಂದಿಗೆ 212 ರನ್‌ಗಳ ಆರಂಭಿಕ ಜೊತೆಯಾಟವನ್ನು ಆಡಿದ ರೋಹಿತ್ 2019ರ ವಿಶ್ವಕಪ್ ಬಳಿಕ ಏಕದಿನದಲ್ಲಿ ಮೊದಲ ವಿಕೆಟ್‌ಗೆ ಟೀಂ ಇಂಡಿಯಾದ ಆರಂಭಿಕರಿಬ್ಬರು ಆಡಿದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಯನ್ನು ಬರೆದರು.ಕಳೆದ ವರ್ಷ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ಎಲ್ಲಾ ಮೂರು ಸ್ವರೂಪಗಳ ನಾಯಕತ್ವವನ್ನು ವಹಿಸಲಾಗಿತ್ತು. ಆದರೆ ಅಂದಿನಿಂದ ಶತಕದ ಬರ ನೀಗಿಸಿಕೊಳ್ಳುವಲ್ಲಿ ವಿಫಲರಾಗಿದ್ದ ರೋಹಿತ್, ಇಂದು ಶತಕ ಸಿಡಿಸುವುದರೊಂದಿಗೆ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-nz-rohit-sharma-scored-hundred-in-the-3rd-odi-against-new-zealand-in-indore-holkar-stadium-psr-au14-507479.html

Leave a Reply

Your email address will not be published. Required fields are marked *