IND vs WI: ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಜಯ: ಮುನ್ನಡೆ ಸಾಧಿಸಿ ನಂ.1 ಸ್ಥಾನಕ್ಕೇರಿದ ಭಾರತ

IND vs WI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಕೇವಲ 150 ರನ್ ಗಳಿಸಿತ್ತು. ಇದಾದ ಬಳಿಕ ಭಾರತ ಐದು ವಿಕೆಟ್‌ ಗೆ 421 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ 271 ರನ್‌ ಗಳ ಮುನ್ನಡೆ ಸಾಧಿಸಿತು.

IND vs WI: India vs West Indies 1st Test: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸವು ಗೆಲುವಿನೊಂದಿಗೆ ಆರಂಭವಾಗಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯವು ಡೊಮಿನಿಕಾದ ವಿಂಡ್ಸರ್ ಪಾರ್ಕ್‌ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ಸಾಧಿಸಿದೆ. ಆತಿಥೇಯರನ್ನು ಭಾರತ ಇನ್ನಿಂಗ್ಸ್ ಮತ್ತು 141 ರನ್‌ ಗಳಿಂದ ಸೋಲಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಕೇವಲ 150 ರನ್ ಗಳಿಸಿತ್ತು. ಇದಾದ ಬಳಿಕ ಭಾರತ ಐದು ವಿಕೆಟ್‌ ಗೆ 421 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ 271 ರನ್‌ ಗಳ ಮುನ್ನಡೆ ಸಾಧಿಸಿತು. ಆದರೆ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಸೋತು 130 ರನ್‌ ಗಳಿಗೆ ಆಲೌಟ್ ಆಯಿತು.

ಮೊದಲ ಟೆಸ್ಟ್‌ನಲ್ಲಿ ಗೆದ್ದು ಟೀಂ ಇಂಡಿಯಾ ನಂಬರ್-1:

ಈ ಟೆಸ್ಟ್ ಪಂದ್ಯದೊಂದಿಗೆ ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಮೂರನೇ ಋತುವನ್ನು ಪ್ರಾರಂಭಿಸಿವೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದ್ದಲ್ಲದೆ, ಅಂಕಪಟ್ಟಿಯಲ್ಲಿ ನಂಬರ್-1 ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯವನ್ನು ಹಿಂದಿಕ್ಕುವ ಮೂಲಕ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ ವಿರುದ್ಧ ನಡೆದ ಆಶಸ್ 2023 ರ ಮೊದಲ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಮೂರನೇ ಟೆಸ್ಟ್ ಪಂದ್ಯದ ಸೋಲಿನಿಂದಾಗಿ ಅದರ ಗೆಲುವಿನ ಶೇಕಡಾವಾರು ಕುಸಿತ ಕಂಡಿದೆ.

ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಪಂದ್ಯ ಅವರಿಗೆ ಸ್ಮರಣೀಯವಾಗಿದ್ದಲ್ಲದೆ, ಟೀಂ ಇಂಡಿಯಾದ ಈ ಮುನ್ನಡೆ ಸಾಧಿಸಲು ಸಹಾಯ ಮಾಡಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ 21 ವರ್ಷದ ಯಶಸ್ವಿ ಜೈಸ್ವಾಲ್ 171 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್‌ಗಾಗಿ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್‌ನಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ 8ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರವೀಣ್ ಆಮ್ರೆ, ಆರ್ ಪಿ ಸಿಂಗ್, ಆರ್ ಅಶ್ವಿನ್, ಶಿಖರ್ ಧವನ್, ರೋಹಿತ್ ಶರ್ಮಾ, ಪೃಥ್ವಿ ಶಾ ಮತ್ತು ಶ್ರೇಯಸ್ ಅಯ್ಯರ್ ತಮ್ಮ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಬೌಲರ್ ಆರ್ ಅಶ್ವಿನ್ 12 ವಿಕೆಟ್ ಪಡೆದರು. ಆರ್ ಅಶ್ವಿನ್ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 5 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದರು. ಆರ್ ಅಶ್ವಿನ್ ಟೆಸ್ಟ್ ನಲ್ಲಿ 8ನೇ ಬಾರಿಗೆ 10 ವಿಕೆಟ್ ಕಬಳಿಸಿದ್ದು, ಈ ಮೂಲಕ ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಸರಿಗಟ್ಟಿದ್ದಾರೆ. ಈ ಪಂದ್ಯದಲ್ಲಿಯೇ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 700 ವಿಕೆಟ್‌ ಗಳನ್ನು ಕಬಳಿಸಿ ದಾಖಲೆ ಬರೆದಿದ್ದಾರೆ.

Source : https://zeenews.india.com/kannada/sports/team-india-first-winning-in-test-match-against-west-indies-india-takes-the-lead-and-becomes-no-1-in-list-145740

Leave a Reply

Your email address will not be published. Required fields are marked *