ಭಾರತ- ಕೆನಡಾ ಪಂದ್ಯ ಮಳೆಗಾಹುತಿ; ಸೂಪರ್ 8 ಸುತ್ತಿಗೆ ರೋಹಿತ್ ಪಡೆ.

ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಕೆನಡಾ (IND vs CAN) ನಡುವಿನ ಔಪಚಾರಿಕ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಸಾಕಷ್ಟು ಮಳೆ ಸುರಿದಿದ್ದರಿಂದ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೈದಾನದ ಸಿಬ್ಬಂದಿ ಮೈದಾನವನ್ನು ಒಣಗಿಸಲು ಸಾಕಷ್ಟು ಪ್ರಯತ್ನಿಸಿದರು ಅದು ಸಾಧ್ಯವಾಗಲಿಲ್ಲ. ಭಾರತ ತಂಡ ಈಗಾಗಲೇ ಎ ಗುಂಪಿನಿಂದ ಸೂಪರ್ 8 ಸುತ್ತಿಗೆ ಪ್ರವೇಶಿಸಿದ್ದು, ಈ ಪಂದ್ಯದ ರದ್ದತಿಯಿಂದ ತಂಡದ ಸ್ಥಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಕೆನಡಾ ವಿರುದ್ಧ ಭಾರತ ತಂಡಕ್ಕೆ ಸೂಪರ್ ಎಂಟಕ್ಕೂ ಮುನ್ನ ಬೆಂಚ್ ಸಾಮರ್ಥ್ಯ ಪರೀಕ್ಷಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ.

ಸೂಪರ್ 8 ಸುತ್ತಿನಲ್ಲಿ 3 ಪಂದ್ಯಗಳು

ಭಾರತ ತಂಡ ಈಗ ತನ್ನ ಮುಂದಿನ ಪಂದ್ಯವನ್ನು ನೇರವಾಗಿ ಸೂಪರ್ 8 ಸುತ್ತಿನಲ್ಲಿ ಆಡಲಿದೆ. ಅಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 20 ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಆಯೋಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಆಟಗಾರರು ಐದು ದಿನಗಳ ನಂತರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ ಹೊರತು ಪಡಿಸಿ ಟೀಂ ಇಂಡಿಯಾ ಗ್ರೂಪ್ ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ವಿರುದ್ಧ ಪಂದ್ಯವನ್ನು ಆಡಲಿದೆ. ಅದು ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್, ಈ ಎರಡರಲ್ಲಿ ಒಂದು ತಂಡವಾಗಿರಲಿದೆ. ಇದಲ್ಲದೇ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧವೂ ಪಂದ್ಯ ಆಡಲಿದೆ. ಈ ಪಂದ್ಯ ಜೂನ್ 24 ರಂದು ನಡೆಯಲ್ಲಿದೆ.

ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ

ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ನ್ಯೂಯಾರ್ಕ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿತ್ತು. ಈ ಅವಧಿಯಲ್ಲಿ ಭಾರತವು ಐರ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ, ಪಾಕಿಸ್ತಾನವನ್ನು 6 ರನ್‌ಗಳಿಂದ ಮತ್ತು ಅಮೆರಿಕವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಟೀಂ ಇಂಡಿಯಾ ತನ್ನ ಗ್ರೂಪ್ ಹಂತವನ್ನು 7 ಅಂಕಗಳೊಂದಿಗೆ ಗ್ರೂಪ್ ಟಾಪರ್ ಆಗಿ ಮುಗಿಸಿದೆ. ಗ್ರೂಪ್ ಹಂತದ ನಂತರ ಟೀಂ ಇಂಡಿಯಾ ಇದೀಗ ಸೂಪರ್ 8 ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಲಿ ಎಂದು ಭಾರತ ತಂಡ ಮತ್ತು ಅಭಿಮಾನಿಗಳು ಆಶಿಸುತ್ತಿದ್ದಾರೆ.

Source : https://tv9kannada.com/sports/cricket-news/t20-world-cup-2024-ind-vs-can-match-abandoned-due-heavy-rain-kannada-news-psr-850837.html

 

Leave a Reply

Your email address will not be published. Required fields are marked *