
India vs Sri Lanka 1st Odi: ಭಾರತ-ಶ್ರೀಲಂಕಾ ನಡುವಣ ಏಕದಿನ ಸರಣಿಯು ನಾಳೆಯಿಂದ (ಜ.10) ಶುರುವಾಗಲಿದೆ. 3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಗೌಹಾಟಿಯಲ್ಲಿ ನಡೆಯಲಿದೆ. ವಿಶೇಷ ಎಂದರೆ ಈ ಸರಣಿಯ ಮೂಲಕ ಟೀಮ್ ಇಂಡಿಯಾದ ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದು, ಹೀಗಾಗಿ ಯುವ ಆಟಗಾರರು ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಲಿದ್ದಾರೆ. ಅದರಲ್ಲೂ ಪಂದ್ಯ ಆರಂಭಕ್ಕೂ ಮುನ್ನವೇ ಜಸ್ಪ್ರೀತ್ ಬುಮ್ರಾ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಲಂಕಾ ವಿರುದ್ಧದ ಸರಣಿಯಲ್ಲಿ ಯಾರ್ಕರ್ ಕಿಂಗ್ ಕಾಣಿಸಿಕೊಳ್ಳುವುದಿಲ್ಲ.
ಇನ್ನು ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇರುವ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದೇ ಕುತೂಹಲ. ಏಕೆಂದರೆ ಇಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಭ್ಮನ್ ಗಿಲ್ ಹಾಗೂ ಕೆಎಲ್ ರಾಹುಲ್ ತಂಡದಲ್ಲಿದ್ದಾರೆ. ಈ ನಾಲ್ವರಲ್ಲಿ ಇಬ್ಬರನ್ನು ಆರಂಭಿಕರಾಗಿ ಆಯ್ಕೆ ಮಾಡಬೇಕಿದೆ. ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಇರುವ ಕಾರಣ ಯಾರಿಗೆ ಚಾನ್ಸ್ ನೀಡಬೇಕೆಂಬ ಸವಾಲು ಕೂಡ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಿದೆ.
ಅತ್ತ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಗಿಲ್ಗೆ ಅವಕಾಶ ಸಿಗಬಹುದು. ಮತ್ತೊಂದೆಡೆ ಕಳೆದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಇಶಾನ್ ಕಿಶನ್ ಕೂಡ ವಿಕೆಟ್ ಕೀಪರ್ ಸ್ಥಾನದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇದರಿಂದ ಕೆಎಲ್ ರಾಹುಲ್ ಅವಕಾಶ ವಂಚಿತರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸುವುದು ಖಚಿತ ಎನ್ನಬಹುದು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಹೊರಗುಳಿಯಬೇಕಾಗಿ ಬರಬಹುದು.
ಇದನ್ನೂ ಓದಿ: WTC final: ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಪಂದ್ಯ ಡ್ರಾ: ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್
ಒಂದು ವೇಳೆ ಶುಭ್ಮನ್ ಗಿಲ್ ಅವರನ್ನು ಹೊರಗಿಟ್ಟರೆ ಮಾತ್ರ ಕೆಎಲ್ ರಾಹುಲ್ಗೆ ಚಾನ್ಸ್ ಸಿಗಬಹುದು. ಅಂದರೆ ಗಿಲ್ ಬದಲಿಗೆ ಇಶಾನ್ ಕಿಶನ್ ಆರಂಭಿಕರಾಗಿ ಆಡಿದ್ರೆ, ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಇಲ್ಲದಿದ್ರೆ ಇಶಾನ್ ಕಿಶನ್ ಆ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನು 6ನೇ, 7ನೇ ಮತ್ತು 8ನೇ ಕ್ರಮಾಂಕದಲ್ಲಿ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಕಾಣಿಸಿಕೊಳ್ಳಬಹುದು.
ಹಾಗೆಯೇ ಪ್ರಮುಖ ವೇಗಿಯಾಗಿ ಮೊಹಮ್ಮದ್ ಶಮಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇನ್ನು ಮತ್ತಿಬ್ಬರು ವೇಗಿಗಳ ಸ್ಥಾನದಲ್ಲಿ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ಕೂಡ ಪೈಪೋಟಿ ಇದೆ. ಹೀಗಾಗಿ ಈ ಮೂವರಲ್ಲಿ ಒಬ್ಬರು ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿಯಲಿದ್ದಾರೆ.
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:
- ರೋಹಿತ್ ಶರ್ಮಾ
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಇಶಾನ್ ಕಿಶನ್
- ಹಾರ್ದಿಕ್ ಪಾಂಡ್ಯ
- ವಾಷಿಂಗ್ಟನ್ ಸುಂದರ್
- ಅಕ್ಷರ್ ಪಟೇಲ್
- ಮೊಹಮ್ಮದ್ ಶಮಿ
- ಅರ್ಷದೀಪ್ ಸಿಂಗ್
- ಮೊಹಮ್ಮದ್ ಸಿರಾಜ್
ಏಕದಿನ ಸರಣಿ ವೇಳಾಪಟ್ಟಿ:
- ಜನವರಿ 10: ಮೊದಲ ಏಕದಿನ ಪಂದ್ಯ (ಸ್ಥಳ- ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗೌಹಾಟಿ)
- ಜನವರಿ 12: ಎರಡನೇ ಏಕದಿನ ಪಂದ್ಯ (ಸ್ಥಳ- ಈಡನ್ ಗಾರ್ಡನ್ಸ್, ಕೋಲ್ಕತ್ತಾ)
- ಜನವರಿ 15: ಮೂರನೇ ಏಕದಿನ ಪಂದ್ಯ (ಗ್ರೀನ್ಫೀಲ್ಡ್ ಸ್ಟೇಡಿಯಂ, ತಿರುವನಂತಪುರಂ)
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.