
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2025) ಟಿ20 ಟೂರ್ನಿಗೆ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರನ್ನು ಒಳಗೊಂಡಿರುವ ಈ ಚಾಂಪಿಯನ್ಸ್ ತಂಡವನ್ನು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮುನ್ನಡೆಸಲಿದ್ದಾರೆ.

ಇನ್ನು ತಂಡದಲ್ಲಿ ಅನುಭವಿ ಕ್ರಿಕೆಟಿಗರಾದ ಸುರೇಶ್ ರೈನಾ, ಶಿಖರ್ ಧವನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ ಹಾಗೂ ವಿನಯ್ ಕುಮಾರ್ ಕೂಡ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿದ್ದಾರೆ.

2024 ರಲ್ಲಿ ನಡೆದ ಚೊಚ್ಚಲ WCL ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡಕ್ಕೆ ಸೋಲುಣಿಸಿ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. ಇದೀಗ ಮತ್ತೊಮ್ಮೆ 5 ತಂಡಗಳನ್ನು ಹಿಂದಿಕ್ಕಿ 2025 ರಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ ಇಂಡಿಯಾ ಚಾಂಪಿಯನ್ಸ್ ಪಡೆ.

ಇನ್ನು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟಿ20 ಟೂರ್ನಿಯ ಎರಡನೇ ಸೀಸನ್ ಜುಲೈ 18 ರಿಂದ ಶುರುವಾಗಲಿದೆ. ಇಂಗ್ಲೆಂಡ್ನಲ್ಲಿ ಜರುಗಲಿರುವ ಆರು ತಂಡಗಳ ನಡುವಣ ಈ ಟಿ20 ಟೂರ್ನಿಯ ಫೈನಲ್ ಪಂದ್ಯವು ಆಗಸ್ಟ್ 2 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಸೌರಭ್ ತಿವಾರಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಗುರುಕ್ರೀತ್ ಮಾನ್, ರಾಹುಲ್ ಶರ್ಮಾ, ನಮನ್ ಓಜಾ, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ವಿನಯ್ ಕುಮಾರ್, ಪವನ್ ನೇಗಿ, ಅನುರೀತ್ ಸಿಂಗ್, ಧವಳ್ ಕುಲ್ಕರ್ಣಿ.