ನ 03: ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವನಿತೆಯರ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ 52 ರನ್‌ಗಳ ಗೆಲುವನ್ನು ಸಾಧಿಸುವ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಇತಿಹಾಸ ಬರೆದಿದೆ.
ಈ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 45 ರನ್ ಗಳಿಸಿದರೆ, ಶಫಾಲಿ ವರ್ಮಾ 87 ರನ್ ಗಳಿಸಿ ಮಹತ್ವದ ಪಂದ್ಯದಲ್ಲಿ ತಂಡದ ಕೈಹಿಡಿದರು. ಇನ್ನುಳಿದಂತೆ ಜೆಮಿಮಾ ರೊಡ್ರಿಗ್ಸ್ 24, ನಾಯಕಿ ಹರ್ಮನ್‌ಪ್ರೀತ್ ಕೌರ್ 20, ಅಮನ್‌ಜೋತ್ ಕೌರ್ 12, ರಿಚಾ ಘೋಷ್ 34, ದೀಪ್ತಿ ಶರ್ಮಾ 58 ರನ್ ಹಾಗೂ ರಾಧಾ ಯಾದವ್ ಅಜೇಯ 3 ರನ್ ಕಲೆಹಾಕಿದರು.
ದಕ್ಷಿಣ ಆಫ್ರಿಕಾ ಪರ ಅಯಬೋಂಗ ಖಾಕ 3 ವಿಕೆಟ್, ಎಮ್‌ಲಾಬಾ, ನದೈನ್ ಡಿ ಕ್ಲೆರ್ಕ್ ಹಾಗೂ ಷ್ಲೋ ಟ್ರಿಯಾನ್ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ನಾಯಕಿ ಲೌರಾ ವಾಲ್ವಾರ್ಡ್ಟ್ ಶತಕ ಬಾರಿಸಿದರೂ ಸಹ ಇನ್ನುಳಿದ ಆಟಗಾರ್ತಿಯರ ಸರಿಯಾದ ಬೆಂಬಲ ದೊರೆಯದ ಕಾರಣ ತಂಡ ಸೋಲನ್ನು ಅನುಭವಿಸಿತು.
ಲೌರಾ 101 ರನ್ ಬಾರಿಸಿದರೆ, ತಜ್ಮಿನ್ ಬ್ರಿಟ್ಸ್ 23, ಅನ್ನೆಕ್ ಬೋಷ್ ಡಕ್‌ಔಟ್, ಸ್ಯೂನ್ ಲುಸ್ 25, ಮರೆಜಾನ್ ಕಾಪ್ 4, ಸಿನಾಲೊ ಜಫ್ತಾ 16, ಆನೇರಿ ಜೆರ್ಕ್‌ಸನ್ 35, ಷ್ಲೋ ಟ್ರಿಯಾನ್ 9, ಆಯಬೊಂಗಾ ಖಾಕ 1, ನಡೈನ್ ಡಿ ಕ್ಲೆರ್ಕ್ 18 ರನ್ ಹಾಗೂ ಯಾವುದೇ ರನ್ ಗಳಿಸದ ಎಮ್‌ಲಾಬಾ ಅಜೇಯರಾಗಿ ಉಳಿದರು.
ಭಾರತದ ಪರ ದೀಪ್ತಿ ಶರ್ಮಾ 5 ವಿಕೆಟ್, ಶಫಾಲಿ ಶರ್ಮಾ 2 ವಿಕೆಟ್ ಹಾಗೂ ಶ್ರೀ ಚರಣಿ ಒಂದು ವಿಕೆಟ್ ಪಡೆದರು.
Views: 33