ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದೆ. ನವಿ ಮುಂಬೈನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿದೆ. ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಹರ್ಮನ್ ಪ್ರೀತ್ ಕೌರ್ ಪಡೆ ಸೊಗಸಾದ ಪ್ರದರ್ಶನ ನೀಡಿ ಮತ್ತೊಮ್ಮೆ ಫೈನಲ್‌ಗೆ ಪ್ರವೇಶಿಸಿತು.
ಈ ಮೂಲಕ ಭಾರತ ಪ್ರಶಸ್ತಿ ಗೆಲ್ಲುವ ಆಸೆ ಚಿಗುರಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮೈದಾನದಲ್ಲಿ ದಿನವೂ ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ. ಇನ್ನು ಹಲವು ದಾಖಲೆಗಳು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುತ್ತದೆ. ಅಂತಹದ್ದೇ ಇನಿಂಗ್ಸ್‌ನ್ನು ಶುಕ್ರವಾರ ಭಾರತದ ಮಹಿಳಾ ಪಡೆ ಇತಿಹಾಸ ನಿರ್ಮಿಸಿದೆ.
ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ರನ್ ಚೇಸ್ ಮಾಡಿ ಅಬ್ಬರಿಸಿದೆ. ಭಾರತದ ಪರ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಗೆಲುವಿನಲ್ಲಿ ಮಿಂಚಿದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೆಮಿಮಾ ದಾಖಲೆಯ ಮೊತ್ತವನ್ನು ಚೇಸ್ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.