
ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20 ರಿಂದ ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡದಲ್ಲಿ ಕನ್ನಡಿಗ ಕರುಣ್ ನಾಯರ್ (Karun Nair) ಕೂಡ ಆಯ್ಕೆಯಾಗಿದ್ದಾರೆ. ವಾಸ್ತವವಾಗಿ ವರ್ಷಗಳ ಹಿಂದೆಯೇ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಆಡಿದ ಮೊದಲ ಪಂದ್ಯದಲ್ಲೇ ತ್ರಿಶತಕ ಸಿಡಿಸಿದ್ದ ಕರುಣ್ಗೆ ಅದ್ಯಾಕೋ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಆದಾಗ್ಯೂ ಛಲ ಬಿಡದ ಕರುಣ್ ದೇಶೀ ಅಂಗಳದಲ್ಲಿ ರನ್ಗಳ ಮಳೆ ಹರಿಸಿ, ಮತ್ತೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಇತ್ತೀಚೆಗೆ ಕರುಣ್ ನಾಯರ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕರುಣ್ಗೆ ರವಿಶಾಸ್ತ್ರಿ ನೀಡಿದ ಸಂದೇಶ
‘ದಿ ಐಸಿಸಿ ರಿವ್ಯೂ’ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಾಸ್ತ್ರಿ, ‘ಕರುಣ್ ನಾಯರ್ ಟೀಂ ಇಂಡಿಯಾಗೆ ಮರಳುವ ಮೊದಲು, ನಾನು ಅವರೊಂದಿಗೆ ಮಾತನಾಡಿದ್ದೆ. ನೀವು ಬಾಗಿಲು ತಟ್ಟಬೇಡಿ, ಅದನ್ನು ಒದ್ದು ಆ ದಿಕ್ಕಿನಲ್ಲಿ ಮುಂದುವರಿಯಿರಿ ಎಂದು ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.
ಕರುಣ್ ನಾಯರ್ ಟೀಂ ಇಂಡಿಯಾ ಪರ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿದ್ದು, ಅದರಲ್ಲಿ ಅವರು 62.33 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 303 ರನ್ ಆಗಿದ್ದು, ಅಚ್ಚರಿಯ ಸಂಗತಿಯೆಂದರೆ ಈ ತ್ರಿಶತಕವನ್ನು ಕರುಣ್ ಇಂಗ್ಲೆಂಡ್ ವಿರುದ್ಧವೇ ಬಾರಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆಲ್ಲಬೇಕಾದರೆ, ನಾಯರ್ ಎಲ್ಲಾ ಪಂದ್ಯಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಆತಿಥೇಯ ಬೌಲರ್‌ಗಳ ಮೇಲೆ ಒತ್ತಡ ಹೇರಬೇಕಾಗುತ್ತದೆ.
ಜೂನ್ 20 ರಿಂದ ಟೆಸ್ಟ್ ಸರಣಿ ಆರಂಭ
ಉಭಯ ತಂಡಗಳ ನಡುವಿನ ಈ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಕರುಣ್ ನಾಯರ್‌ಗೂ ಅವಕಾಶ ಸಿಗಬೇಕು ಎಂದು ಅನೇಕ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದ್ದು, ಮೊದಲ ಟೆಸ್ಟ್ ಗೆಲ್ಲುವ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರುವ ಇರಾದೆಯಲ್ಲಿದೆ. ಆದಾಗ್ಯೂ, ಇಂಗ್ಲೆಂಡ್ ತಂಡವನ್ನು ಅವರ ತವರಿನಲ್ಲಿ ಸೋಲಿಸುವುದು ಟೀಂ ಇಂಡಿಯಾಕ್ಕೆ ಅಷ್ಟು ಸುಲಭವಲ್ಲ.