ಅಂತರರಾಷ್ಟ್ರಿಯ ಬೂಕರ್‌ ಪ್ರಶಸ್ತಿ ವೈವಿಧ್ಯಮಯತೆಗೆ ಸಿಕ್ಕ ಗೆಲುವು: ಕನ್ನಡ ಲೇಖಕಿ ಬಾನು ಮುಷ್ತಾಕ್‌ ಸಂತಸದ ನುಡಿ.

ಲಂಡನ್‌ : ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ವಲಯದಲ್ಲಿ ಕನ್ನಡಕ್ಕೆ ಸಿಕ್ಕ ಗೌರವವಿದು. ಅದರಲ್ಲೂ ಇದು ನನ್ನ ಗೆಲುವು ಎನ್ನುವುದಕ್ಕಿಂತ ವೈವಿಧ್ಯತೆಗೆ ದೊರೆತ ಜಯ ಎನ್ನುವುದೇ ಅರ್ಥಪೂರ್ಣ. ನನ್ನ ಸುತ್ತಮುತ್ತಲಿನ ಪರಿಸರದಲ್ಲಿ ಹೆಣ್ಣು ಮಕ್ಕಳು ಪಡುತ್ತಿದ್ದ ಕಷ್ಟ, ಸಂಕೋಲೆಗಳೇ ಅಕ್ಷರ ರೂಪ ಪಡೆದವು.

ಯಾವ ಕಥೆಯೂ ಸಣ್ಣದಾಗಿರುವುದಿಲ್ಲ. ಅನುಭವದ ಆಧಾರದ ಮೇಲೆ ರೂಪಗೊಂಡ ನೈಜ ಕಥನವದು. ಕಥೆಯಲ್ಲಿ ಮೂಡಿ ಬರುವ ಅನುಭವದ ಪ್ರತಿ ಎಳೆಯೂ ಕಥೆ ತೂಕವನ್ನು ಹೊಂದಿರುತ್ತದೆ. ಹಾಗೆ ಕನ್ನಡದಲ್ಲಿ ಇಂತಹ ಅನುಭವಗಳನ್ನು ಆಧರಿಸಿ ಸಣ್ಣ ಕಥೆಗಳನ್ನು ರಚಿಸಿದೆ. ಈಗ ಬೂಕರ್‌ ಪ್ರಶಸ್ತಿ ಪಡೆಯುವ ಹಂತಕ್ಕೆ ಹೋಗಿರುವ ಈ ಕೃತಿಯೂ ಕೂಡ ಹೀಗೆಯೇ ರೂಪುಗೊಂಡಿತ್ತು. ನಿಜಕ್ಕೂ ಈ ಗೌರವ ಸಿಕ್ಕಿರುವುದು ಸಂತಸದಾಯಕವೇ.

ಜಗತ್ತಿನ ಸಾಹಿತ್ಯ ವಲಯದಲ್ಲಿ ಪ್ರತಿಷ್ಠಿತ ಎನ್ನುವ ಅಂತರಾಷ್ಟ್ರೀಯ ಬೂಕರ್‌ ಗೌರವಕ್ಕೆ ಭಾಜನರಾಗಿರುವ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರ ಮನದಾಳದ ನುಡಿ ಇವು.

ಕಳೆದ ಕೆಲವು ತಿಂಗಳಿನಿಂದ ನಡೆದಿದ್ದ ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳನ್ನು ದಾಟಿಕೊಂಡು ಅಂತಿಮ ಹಂತದಲ್ಲೂ ಗೆಲುವಿನ ನಗೆ ಬೀರಿದ ಬಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಇಂಗ್ಲೀಷ್‌ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್‌ ಈ ಬಾರಿಯೂ ಬೂಕರ್‌ ಪ್ರಶಸ್ತಿಗೆ ಆಯ್ಕೆಯಾಗಿದೆ. ಅಂತಿಮ ಹಂತದ ಆಯ್ಕೆ ವೇಳೆ ಲಂಡನ್‌ನಲ್ಲಿಯೇ ಇದ್ದ ಬಾನು ಮುಷ್ತಾಕ್‌ ಆಯ್ಕೆ ಕ್ಷಣದ ಖುಷಿಯನ್ನು ಅನುಭವಿಸಿದರು. ಇಂಗ್ಲೀಷ್‌ಗೆ ಕೃತಿ ಅನುವಾದಿಸಿರುವ ದೀಪಾ ಭಾಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ವೇಳೆ ಬಾನು ಮುಷ್ತಾಕ್‌ ಮಾತನಾಡಿದರು.

ನಮ್ಮ ಭಾಷೆಯಲ್ಲಿ ಬರೆದ ಕೃತಿಗೆ ಈ ಮನ್ನಣೆ ಸಿಗುತ್ತಿರುವುದು ಕನ್ನಡಕ್ಕೆ ಸಿಗುವ ಗೌರವವೂ ಹೌದು ಎಂದು ಬಾನು ಮುಷ್ತಾಕ್ ಅವರು ಮೂರು ತಿಂಗಳ ಹಿಂದೆ ಕೊನೆ ಹಂತಕ್ಕೆ ಆಯ್ಕೆಯಾದಾಗಲೂ ಹೇಳಿದ್ದರು.

ಕಳೆದ ತಿಂಗಳು ಮೈಸೂರಿನಲ್ಲಿ ನಡೆದಿದ್ದ ಸಮಾರಂಭದಲ್ಲಿ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಯನ್ನು ಲೇಖಕಿ ಬಾನು ಮುಷ್ತಾಕ್ ಬಿಡುಗಡೆ ಮಾಡಿದ್ದರು. ಈ ಬಾರಿ ಬೂಕರ್‌ ಪ್ರಶಸ್ತಿ ಗೆಲ್ಲಲು ನೀವೆಲ್ಲ ಹರಸಿ ಎಂದೂ ಕೋರಿದ್ದರು.

ಹೆಮ್ಮೆಯ ಕನ್ನಡತಿ ಬಾನು

ಅಪ್ಪಟ ಕನ್ನಡತಿ ಆಗಿರುವ ಬಾನು ಅವರು ತಮ್ಮ ಬದುಕನ್ನು ಹೋರಾಟ, ಚಿಂತನೆ, ಬರವಣಿಗೆ ಮೂಲಕವೇ ರೂಪಿಸಿಕೊಂಡವರು. ಜನರೊಂದಿಗೆ ನಿರಂತರ ಒಡನಾಟ, ಅವರ ಬದುಕಿನ ಹಲವು ಆಯಾಮಗಳಲ್ಲಿ ಜತೆಗಿದ್ದು ಶಕ್ತಿಯಾಗುತ್ತಲೇ ಆ ಅನುಭವಕ್ಕೆ ಸಾಹಿತ್ಯ ರೂಪ ನೀಡಿ ಯಶಸ್ವಿಯು ಆದವರು. ಹಾಸನದಲ್ಲಿ ಜನಿಸಿ ಅಲ್ಲಿಯೇ ನೆಲೆಸಿರುವ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಕ್ರಿಯಾಶೀಲರು.ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಗಾಗಿ 9 ವರ್ಷ ಸೇವೆ ಸಲ್ಲಿಸಿದ್ದಾರೆ. 1954 ಏಪ್ರಿಲ್ 03 ರಂದು ಹಾಸನದಲ್ಲಿ ಜನಿಸಿದರು.

ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದವಾಗಿರುವುದು ವಿಶೇಷ.

ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ.

ಬಾನು ಅವರ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ‘ಹಸೀನಾ’ ಚಿತ್ರ ನಿರ್ದೇಶಿಸಿದ್ದರು.ಅವರು ಬರೆದ ‘ಬೆಂಕಿಮಳೆ’ ಕತೆ ಹಸೀನ ಹೆಸರಲ್ಲಿ ಚಲನಚಿತ್ರವಾಗಿ 3 ರಾಷ್ಟ್ರಪ್ರಶಸ್ತಿಗಳಿಸಿದೆ. ಕುಬ, ಬಡವರ ಮಗಳು ಹೆಣ್ಣಲ್ಲ’ ಅವರ ಕಾದಂಬರಿ ರಚಿಸಿದ್ದಾರೆ. “ಹೆಜ್ಜೆ ಮೂಡಿದ ಹಾದಿ, ಬೆಂಕಿಮಳೆ, ಎದೆಯ ಹಣತೆ” ಕಥಾಸಂಕಲನ ಹೊರತಂದಿದ್ದು, ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಒಮ್ಮೆ ಹೆಣ್ಣಾಗು ಪ್ರಭುವೆ ನಾಟಕ ರೂಪಾಂತರಕ್ಕೆ ಇಂಟರ್ ನ್ಯಾಷನಲ್ ವುಮನ್ ಫಾರ್‌ ರೇಡಿಯೋ ಆಯಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳಿಗೂ ಬಾನು ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *