IPL 2023: ಕಣಕ್ಕಿಳಿಯದ ಮ್ಯಾಕ್ಸ್​ವೆಲ್:​ RCB ಗೆ ಹೊಸ ಚಿಂತೆ ಶುರು..!

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ದಿನಗಳು ಮಾತ್ರ ಉಳಿದಿರುವಾಗಲೇ ಆಟಗಾರರ ಗಾಯದ ಸಮಸ್ಯೆಯು ಇದೀಗ ಎಲ್ಲಾ ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ. ಈಗಾಗಲೇ ಐಪಿಎಲ್​ನಿಂದ 6 ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ.ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದ ಇಂಗ್ಲೆಂಡ್ ಆಲ್​ರೌಂಡರ್ ವಿಲ್ ಜಾಕ್ಸ್ ಕೂಡ ಗಾಯದ ಕಾರಣ ಟೂರ್ನಿಯಿಂದ ಹೊರನಡೆದಿದ್ದಾರೆ. ಇದೀಗ ಬದಲಿ ಆಟಗಾರನಾಗಿ ಆರ್​ಸಿಬಿಗೆ ನ್ಯೂಜಿಲೆಂಡ್ ತಂಡದ ಆಲ್​ರೌಂಡರ್ ಮೈಕೆಲ್ ಬ್ರೇಸ್​ವೆಲ್ ಆಯ್ಕೆಯಾಗಿದ್ದಾರೆ. ಇದರ ನಡುವೆ ಮತ್ತೋರ್ವ ಆರ್​ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ಬಹಿರಂಗವಾಗಿದೆ.ಮೂರುವರೆ ತಿಂಗಳ ಹಿಂದೆ ಗಾಯಗೊಂಡಿದ್ದ ಮ್ಯಾಕ್ಸ್​ವೆಲ್ ಇತ್ತೀಚೆಗಷ್ಟೇ ಸಂಪೂರ್ಣವಾಗಿ ಚೇತರಿಸಿಕೊಂಡು ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಭಾರತದ ವಿರುದ್ಧ ಏಕದಿನ ಸರಣಿಗೂ ಮುನ್ನ ಶೆಫೀಲ್ಡ್ ಶೀಲ್ಡ್​ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಸೌತ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಕ್ಟೋರಿಯಾ ಪರ ಆಡಿದ್ದ ಮ್ಯಾಕ್ಸಿ ಫೀಲ್ಡಿಂಗ್​ ವೇಳೆ ಮತ್ತೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಂಡರೂ ಆಡಿದ್ದು ಕೇವಲ 1 ಪಂದ್ಯ ಮಾತ್ರ. ಅಂದರೆ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಸೀಸ್ ಆಟಗಾರ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಫಿಟ್​ನೆಸ್ ಸಮಸ್ಯೆ ಎಂಬುದನ್ನು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ತಿಳಿಸಿದ್ದಾರೆ.ಗ್ಲೆನ್ ಮ್ಯಾಕ್ಸ್​ವೆಲ್ ತುಸು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ಸ್ಮಿತ್ ತಿಳಿಸಿದ್ದರು. ಆದರೆ ಮೂರನೇ ಏಕದಿನ ಪಂದ್ಯದಿಂದಲ್ಲೂ ಮ್ಯಾಕ್ಸಿ ಹೊರಗುಳಿದಿರುವುದು ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.ಏಕೆಂದರೆ ಐಪಿಎಲ್ ಆರಂಭವಾಗಲು ಇನ್ನು ವಾರ ಮಾತ್ರ ಉಳಿದಿದೆ. ಇತ್ತ ಗ್ಲೆನ್ ಮ್ಯಾಕ್ಸ್​ವೆಲ್ ಫಿಟ್​ನೆಸ್​ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆರ್​ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಈ ವೇಳೆಗೆ ಮ್ಯಾಕ್ಸ್​ವೆಲ್ ಸಂಪೂರ್ಣ ಫಿಟ್​ನೆಸ್ ಸಾಧಿಸಲಿದ್ದಾರಾ ಎಂಬುದೇ ಈಗ ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ.
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

source https://tv9kannada.com/photo-gallery/cricket-photos/ipl-2023-kannada-glenn-maxwell-misses-out-2-odis-due-to-fitness-concerns-zp-au50-541645.html

Views: 0

Leave a Reply

Your email address will not be published. Required fields are marked *