IPL 2023: ದಾಖಲೆಯ 263 ರನ್ಸ್​: ಅಂದು RCB ಪರ ಯಾರ್ಯಾರು ಎಷ್ಟು ರನ್​ಗಳಿಸಿದ್ದರು? ಇಲ್ಲಿದೆ ಮಾಹಿತಿ

IPL 2023: ದಾಖಲೆಯ 263 ರನ್​ಗಳು. 10 ವರ್ಷಗಳ ಹಿಂದೆ ಐಪಿಎಲ್​ನಲ್ಲಿ ಆರ್​ಸಿಬಿ ಕಲೆಹಾಕಿದ 263 ರನ್​ಗಳ ಸ್ಕೋರ್​ಕಾರ್ಡ್ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಕಲೆಹಾಕಿದ 257 ರನ್​ಗಳು.ಅಂದರೆ ಐಪಿಎಲ್ ಇತಿಹಾಸದಲ್ಲೇ ಕೇವಲ 2 ತಂಡಗಳು ಮಾತ್ರ 250 ಕ್ಕಿಂತ ಹೆಚ್ಚು ರನ್​ ಕಲೆಹಾಕಿದೆ. 2013 ರಲ್ಲಿ ಆರ್​ಸಿಬಿ 263 ರನ್​ಗಳಿಸಿದರೆ, 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ 257 ರನ್​ ಬಾರಿಸಿದೆ. ಇದಾಗ್ಯೂ ಆರ್​ಸಿಬಿ ಬರೆದಿದ್ದ ಹಳೆಯ ದಾಖಲೆಯ ಈಗಲೂ ಭರ್ಜರಿ ದಾಖಲೆಯಾಗಿ ಉಳಿದಿರುವುದು ವಿಶೇಷ. ಈ ದಾಖಲೆಯ ಇನಿಂಗ್ಸ್​ನಲ್ಲಿ ಅಂದು ಆರ್​ಸಿಬಿ ಪರ ಯಾರ್ಯಾರು ಎಷ್ಟೆಷ್ಟು ರನ್ ಕಲೆಹಾಕಿದ್ದರು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
2013, ಏಪ್ರಿಲ್ 23...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ವಾರಿಯರ್ಸ್ ತಂಡದ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಸ್ಪೋಟಕ ಆರಂಭ ಒದಗಿಸಿದ್ದರು. ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅತ್ತ ಯೂನಿವರ್ಸ್ ಬಾಸ್​ನ ಅಬ್ಬರದಿಂದ ಪುಣೆ ವಾರಿಯರ್ಸ್ ಬೌಲರ್​ಗಳು ಲಯ ತಪ್ಪಿದರು. ಪರಿಣಾಮ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು.ಅಷ್ಟೇ ಅಲ್ಲದೆ 66 ಎಸೆತಗಳಲ್ಲಿ 17 ಸಿಕ್ಸ್​ ಹಾಗೂ 13 ಫೋರ್​ನೊಂದಿಗೆ ಅಜೇಯ 175 ರನ್​ ಬಾರಿಸಿ ಐಪಿಎಲ್​ನಲ್ಲಿ ಹೊಸ ದಾಖಲೆಯನ್ನೂ ಕೂಡ ಬರೆದರು.ಮತ್ತೊಂದೆಡೆ ತಿಲಕರತ್ನೆ ದಿಲ್ಶಾನ್ ಆರಂಭದಲ್ಲಿ ತುಸು ಬಿರುಸಿನ ಬ್ಯಾಟಿಂಗ್ ನಡೆಸಿದರೂ, ಆ ಬಳಿಕ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ 36 ಎಸೆತಗಳನ್ನು ಎದುರಿಸಿದ ದಿಲ್ಶಾನ್ 5 ಫೋರ್​ನೊಂದಿಗೆ 33 ರನ್​ಗಳಿಸಿ ಲೂಕ್​ ರೈಟ್​ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಇದಕ್ಕೂ ಮುನ್ನ ಗೇಲ್ ಜೊತೆ ಮೊದಲ ವಿಕೆಟ್​ಗೆ 167 ರನ್​ಗಳ ಭರ್ಜರಿ ಜೊತೆಯಾಟವಾಡಿದ್ದರು.ಆ ನಂತರ ಬಂದ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್​ನೊಂದಿಗೆ 11 ರನ್​ಗಳಿಸಿದರೂ ಅಶೋಕ್ ದಿಂಡಾ ಅವರ ಅತ್ಯುತ್ತಮ ಫೀಲ್ಡಿಂಗ್​ನಿಂದಾಗಿ ರನೌಟ್ ಆಗಿ ಹೊರ ನಡೆದರು.ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಕ್ಷರಶಃ ಅಬ್ಬರಿಸುವ ಮೂಲಕ ಪಂದ್ಯವನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ದರು. ಕೇವಲ 8 ಎಸೆತಗಳನ್ನು ಎದುರಿಸಿದ್ದ ಎಬಿಡಿ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 31 ರನ್​ ಬಾರಿಸಿ ಮಿಚೆಲ್ ಮಾರ್ಷ್​ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟರಲ್ಲಾಗಲೇ ಆರ್​ಸಿಬಿ ತಂಡದ ಮೊತ್ತ 250 ರ ಗಡಿದಾಟಿತ್ತು.ಹಾಗೆಯೇ 5ನೇ ಕ್ರಮಾಂಕದಲ್ಲಿ ಆಡಿದ ಸೌರವ್ ತಿವಾರಿ 2 ಎಸೆತಗಳಲ್ಲಿ 2 ರನ್​ಗಳಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವಿ ರಾಂಪಾಲ್ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್​ಗಳಿಸಿತು.264 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಪುಣೆ ವಾರಿಯರ್ಸ್ ಪರ ಸ್ಟೀವ್ ಸ್ಮಿತ್ 31 ಎಸೆತಗಳಲ್ಲಿ 41 ರನ್​ಗಳಿಸಿದ್ದು ಗರಿಷ್ಠ ಸ್ಕೋರ್. ಅಲ್ಲದೆ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 133 ರನ್​ಗಳಿಸುವ ಮೂಲಕ ಪುಣೆ ವಾರಿಯರ್ಸ್ ತಂಡವು 130 ರನ್​ಗಳ ಹೀನಾಯ ಸೋಲೊಪ್ಪಿಕೊಂಡಿತ್ತು. ಈ ದಾಖಲೆಯ ಪಂದ್ಯದ ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗಿನಂತಿದೆ...ಪುಣೆ ವಾರಿಯರ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ (ನಾಯಕ) , ರಾಬಿನ್ ಉತ್ತಪ್ಪ ( ವಿಕೆಟ್ ಕೀಪರ್ ) , ಯುವರಾಜ್ ಸಿಂಗ್ , ಸ್ಟೀವ್ ಸ್ಮಿತ್ , ಲೂಕ್ ರೈಟ್ , ಮಿಚೆಲ್ ಮಾರ್ಷ್ , ಮಿಥುನ್ ಮನ್ಹಾಸ್ , ಭುವನೇಶ್ವರ್ ಕುಮಾರ್ , ಈಶ್ವರ್ ಪಾಂಡೆ , ಅಲಿ ಮುರ್ತಾಜಾ , ಅಶೋಕ್ ದಿಂಡಾ.ಆರ್​ಸಿಬಿ ಪ್ಲೇಯಿಂಗ್ 11: ತಿಲಕರತ್ನೆ ದಿಲ್ಶನ್ , ಕ್ರಿಸ್ ಗೇಲ್ , ವಿರಾಟ್ ಕೊಹ್ಲಿ (ನಾಯಕ) , ಎಬಿ ಡಿವಿಲಿಯರ್ಸ್ , ಸೌರಭ್ ತಿವಾರಿ , ಅರುಣ್ ಕಾರ್ತಿಕ್ ( ವಿಕೆಟ್ ಕೀಪರ್ ) , ರವಿ ರಾಂಪಾಲ್ , ವಿನಯ್ ಕುಮಾರ್ , ಮುರಳಿ ಕಾರ್ತಿಕ್ , ಆರ್ ಪಿ ಸಿಂಗ್ , ಜಯದೇವ್ ಉನಾದ್ಕಟ್.

source https://tv9kannada.com/photo-gallery/cricket-photos/ipl-rcb-263-scorecard-ipl-highest-score-kannada-news-zp-au50-566234.html

Leave a Reply

Your email address will not be published. Required fields are marked *