IPL 2023: ಅಂಪೈರ್ ತಪ್ಪಿನಿಂದ RCB ಗೆ 5 ರನ್​ ನಷ್ಟ: ಮೋಸದಿಂದ ಗೆದ್ರಾ LSG?

IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 15ನೇ ಪಂದ್ಯವು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು.
ಅದರಲ್ಲೂ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 11.2 ಓವರ್​ಗಳಲ್ಲಿ 96 ರನ್​ಗಳಿಸಿದ್ದ ಈ ಜೋಡಿಯನ್ನು ಬೇರ್ಪಡಿಸಿದ್ದು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ. ಲಕ್ನೋ ತಂಡದ ಹಿರಿಯ ಸ್ಪಿನ್ನರ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಯತ್ನಿಸಿದ ವಿರಾಟ್ ಕೊಹ್ಲಿ (61) ಕ್ಯಾಚ್ ನೀಡಿದ್ದರು.
ಆದರೆ ಈ ಓವರ್​ ವೇಳೆ ಅಮಿತ್ ಮಿಶ್ರಾ ಚೆಂಡಿಗೆ ಲಾಲಾರಸ (ಎಂಜಲು) ಬಳಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐಸಿಸಿ ನಿಯಮದ ಪ್ರಕಾರ ಯಾವುದೇ ಸಂದರ್ಭದಲ್ಲೂ ಚೆಂಡಿಗೆ ಎಂಜಲನ್ನು ಬಳಸುವಂತಿಲ್ಲ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಚೆಂಡಿನ ಮೇಲ್ಮೈಗೆ ಎಂಜಲು ಬಳಸುವುದನ್ನು ಐಸಿಸಿ ಶಾಶ್ವತವಾಗಿ ನಿಷೇಧಿಸಿದೆ.ಚೆಂಡಿನ ಮೇಲ್ಮೈಯನ್ನು ಎಂಜಲಿಂದ ಸವರಿದರೆ ಬಾಲ್​ ಹೆಚ್ಚು ಸ್ವಿಂಗ್ ಪಡೆಯುತ್ತದೆ. ಇದೇ ತಂತ್ರವನ್ನು ಬಳಸಿ ಬೌಲರ್​ಗಳು ಬ್ಯಾಟರ್​ಗಳನ್ನು ಕಾಡುತ್ತಿದ್ದರು. ಆದರೆ ಕೋವಿಡ್ ಕಾರಣ ಐಸಿಸಿ ಚೆಂಡಿಗೆ ಎಂಜಲು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮ ಐಪಿಎಲ್​ಗೂ ಅನ್ವಯವಾಗುತ್ತದೆ.ಇದಾಗ್ಯೂ ಅಮಿತ್ ಮಿಶ್ರಾ ಚೆಂಡಿಗೆ ಎಂಜಲನ್ನು ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಮಿಶ್ರಾ ಚೆಂಡಿಗೆ ಲಾಲಾರಸ ಬಳಸಲಾರಂಭಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಆದರೆ ಇದ್ಯಾವುದನ್ನು ಅಂಪೈರ್ ಗಮನಿಸಿಲ್ಲ ಎಂಬುದೇ ಅಚ್ಚರಿ.ಏಕೆಂದರೆ ಬೌಲರ್​ ಲಾಲಾರಸ ಬಳಸಿರುವುದು ಕಂಡು ಬಂದರೆ ಬಾಲ್ ಬದಲಿಸಬೇಕಾಗುತ್ತದೆ. ಅಲ್ಲದೆ ಬೌಲರ್​ಗೆ ಮೊದಲ ಎಚ್ಚರಿಕೆ ನೀಡಬೇಕಾಗುತ್ತದೆ. ಇದನ್ನು ಪುನರಾವರ್ತಿಸಿದರೆ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳನ್ನು ಪೆನಾಲ್ಟಿಯಾಗಿ ನೀಡಬೇಕೆಂಬ ನಿಯಮವಿದೆ. ಆದರೆ ಅಂಪೈರ್ ನಿರ್ಲಕ್ಷ್ಯದಿಂದ ಚೆಂಡನ್ನು ಬದಲಿಸಲಾಗಿಲ್ಲ.ಅಷ್ಟೇ ಅಲ್ಲದೆ ಅಮಿತ್ ಮಿಶ್ರಾಗೆ ಯಾವುದೇ ಎಚ್ಚರಿಕೆಯನ್ನೂ ಕೂಡ ನೀಡಿಲ್ಲ. ಇತ್ತ 2 ಓವರ್ ಬೌಲಿಂಗ್ ಮಾಡಿದ್ದಾರೆ. ಈ 12 ಎಸೆತಗಳ ನಡುವೆ ಅವರು ಚೆಂಡಿಗೆ ಎಂಜಲು ಸವರುವುದನ್ನು ಪುನರಾವರ್ತಿಸಿರಬಹುದು ಎಂಬ ವಾದ ಇದೀಗ ಮುನ್ನಲೆಗೆ ಬಂದಿದೆ.
ಅಂದರೆ ಅಮಿತ್ ಮಿಶ್ರಾ ಈ ತಪ್ಪನ್ನು ಪುನರಾವರ್ತಿಸಿದ್ದರೆ ಆರ್​ಸಿಬಿಗೆ 5 ರನ್​ಗಳನ್ನು ನೀಡಬೇಕಿತ್ತು. ಆದರೆ ಅಂಪೈರ್ ನಿರ್ಲಕ್ಷ್ಯದಿಂದಾಗಿ ಚೆಂಡು ಬದಲಾವಣೆ ಮಾಡಿಲ್ಲ. ಆರ್​ಸಿಬಿಗೆ 5 ರನ್​ ಕೂಡ ಸಿಗಲಿಲ್ಲ. ಒಂದು ವೇಳೆ ಪೆನಾಲ್ಟಿಯಾಗಿ ಈ 5 ರನ್ ಸಿಕ್ಕಿದಿದ್ದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡವು 4 ರನ್​ಗಳಿಂದ ಜಯ ಸಾಧಿಸುತ್ತಿತ್ತು ಎಂಬುದು ಅಭಿಮಾನಿಗಳ ವಾದ.

source https://tv9kannada.com/photo-gallery/cricket-photos/ipl-2023-amit-mishra-applied-saliva-on-ball-icc-rules-on-saliva-kannada-news-zp-au50-553761.html

Views: 0

Leave a Reply

Your email address will not be published. Required fields are marked *