IPL 2025: ಐಪಿಎಲ್​​ನಲ್ಲಿ ಹೊಸ ಇತಿಹಾಸ ಬರೆದ 13ರ ಬಾಲಕ

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ತಮ್ಮ 13ನೇ ವಯಸ್ಸಿನಲ್ಲಿ ಐಪಿಎಲ್​​ಗೆ ಆಯ್ಕೆಯಾಗುವ ಮೂಲಕ ಎಂಬುದು ವಿಶೇಷ. ನವೆಂಬ್ 25 ರಂದು ಜಿದ್ದಾದಲ್ಲಿ ನಡೆದ ಐಪಿಎಲ್​ ಮೆಗಾ ಹರಾಜಿನಲ್ಲಿ ವೈಭವ್ ಅವರನ್ನು ರಾಜಸ್ಥಾನ್ ರಾಯಲ್ಸ್ 1.10 ಕೋಟಿ ರೂ.ಗೆ ಖರೀದಿಸಿದೆ. ಇದರೊಂದಿಗೆ ಐಪಿಎಲ್​ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಪ್ರಯಾಸ್ ರೇ ಬರ್ಮನ್ ಹೆಸರಿನಲ್ಲಿತ್ತು. ಐಪಿಎಲ್ 2019 ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪ್ರಯಾಸ್ ಅವರನ್ನು 1.5 ಕೋಟಿ ರೂ. ಖರೀದಿಸಿತ್ತು. ಈ ವೇಳೆಗೆ ಅವರ ವಯಸ್ಸು 16 ವರ್ಷ. ಈ ಮೂಲಕ ಐಪಿಎಲ್​​ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಪ್ರಯಾಸ್ ನಿರ್ಮಿಸಿದ್ದರು.

ಇದೀಗ 13ನೇ ವಯಸ್ಸಿನಲ್ಲಿ ಐಪಿಎಲ್​​ಗೆ ಎಂಟ್ರಿ ಕೊಡುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಈ ಬಾರಿಯ ಐಪಿಎಲ್​​ನಲ್ಲಿ ಕಣಕ್ಕಿಳಿದರೆ ಟಿ20 ಇತಿಹಾಸದಲ್ಲೇ ಸ್ಪರ್ಧಾತ್ಮಕ ಟೂರ್ನಿ ಆಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಅಂದಹಾಗೆ ವೈಭವ್ ಸೂರ್ಯವಂಶಿ ಬಿಹಾರ ಮೂಲದ ಕ್ರಿಕೆಟಿಗ. 5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್ 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು ಎಂದರೆ ನಂಬಲೇಬೇಕು. ಅಲ್ಲದೆ ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.

2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು.

ಹಾಗೆಯೇ ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಬಾರಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೀಗ ಐಪಿಎಲ್​ಗೂ ಎಂಟ್ರಿ ಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Source : https://tv9kannada.com/photo-gallery/cricket-photos/ipl-2025-kannada-vaibhav-suryavanshi-becomes-youngest-player-in-ipl-history-zp-940923-6.html

Leave a Reply

Your email address will not be published. Required fields are marked *