IPL 2025: RCB ಅನ್​ಬಾಕ್ಸ್ ಈವೆಂಟ್; 60 ನಿಮಿಷಗಳಲ್ಲೇ ಎಲ್ಲಾ ಟಿಕೆಟ್​ ಸೋಲ್ಡ್ ಔಟ್

ಕಳೆದ ಬಾರಿಯಂತೆ ಈ ಬಾರಿಯೂ 2025 ರ ಐಪಿಎಲ್ (IPL 2025) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಅನ್​ಬಾಕ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆರ್​ಸಿಬಿಯ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಮಾರ್ಚ್ 17 ರಂದು ನಡೆಯಲ್ಲಿದೆ. ಈ ಕಾರ್ಯಕ್ರಮಕ್ಕೆ ಇಂದು ಟಿಕೆಟ್ ಮಾರಾಟವನ್ನು ಆರಂಭಿಸಲಾಗಿದ್ದು, ಟಿಕೆಟ್ ಮಾರಾಟ ಆರಂಭವಾದ ಒಂದು ಗಂಟೆಯೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಕಳೆದ ಬಾರಿ ನಡೆದಿದ್ದ ಅನ್​ಬಾಕ್ಸ್ ಈವೆಂಟ್​ಗೂ ಇಡೀ ಕ್ರೀಡಾಂಗಣವೇ ತುಂಬಿತ್ತು. ಈ ಬಾರಿಯೂ ಅದೇ ನಿರೀಕ್ಷೆ ಇಡಲಾಗಿತ್ತು. ಅದರಂತೆ ಟಿಕೆಟ್ ಮಾರಾಟ ಆರಂಭವಾದ 60 ನಿಮಿಷಗಳಲ್ಲೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ತಂಡಕ್ಕೆ ನೂತನ ನಾಯಕ

ಈ ವರ್ಷದ ಈವೆಂಟ್ ಹಿಂದೆಂದಿಗಿಂತಲೂ ಭಿನ್ನವಾಗಿರಲಿದ್ದು, ತಂಡಕ್ಕೆ ನೂತನವಾಗಿ ಆಯ್ಕೆಯಾಗಿರುವ ನಾಯಕ ರಜತ್ ಪಾಟಿದರ್ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿರಲಿದ್ದಾರೆ. ಇವರೊಂದಿಗೆ ತಂಡದ ಇನ್ನು ಕೆಲವು ಸ್ಟಾರ್ ಆಟಗಾರರು ಈ ಈವೆಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಇದೇ ಕಾರ್ಯಕ್ರಮದಲ್ಲಿ ಆರ್​ಸಿಬಿ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಲಿದ್ದಾನೆ. ಇದುವರೆಗೆ ಈ ಗೌರವಕ್ಕೆ ಮೂವರು ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್​ ಹಾಗೂ ಕನ್ನಡಿಗ ಆರ್​ ವಿನಯ್​ಕುಮಾರ್ ಭಾಜನರಾಗಿದ್ದರು. ಈ ಬಾರಿ ಯಾರಿಗೆ ಆ ಗೌರವ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಅನನ್ಯ ಅವಕಾಶವನ್ನು ನೀಡುತ್ತದೆ

ಇನ್ನು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ರಾಜೇಶ್ ಮೆನನ್, ‘ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಈ ಸೀಸನ್ ಆರಂಭಕ್ಕೆ ಉತ್ತಮ ವೇದಿಕೆಯಾಗಿದೆ. ಟೂರ್ನಿ ಆರಂಭವಾಗುವ ಮೊದಲು ಅಭಿಮಾನಿಗಳು ತಂಡದೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ನಮ್ಮ ಅಭಿಮಾನಿಗಳಿಗೆ ಮತ್ತೊಂದು ಸ್ಮರಣೀಯ ಅನುಭವವನ್ನು ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

ಕೆಕೆಆರ್ ಮೊದಲ ಎದುರಾಳಿ

ಹಾಗೆಯೇ 2025 ರ ಐಪಿಎಲ್​ನಲ್ಲಿ ಆರ್‌ಸಿಬಿಯ ಪ್ರಯಾಣದ ಬಗ್ಗೆ ಹೇಳುವುದಾದರೆ… ರಜತ್ ಪಾಟಿದರ್ ನಾಯಕತ್ವದ ರೆಡ್ ಆರ್ಮಿ ಮಾರ್ಚ್ 22 ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲ್ಲಿರುವ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಆ ಬಳಿಕ ಆರ್‌ಸಿಬಿ ಏಪ್ರಿಲ್ 2 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಈ ಆವೃತ್ತಿಯಲ್ಲಿ ತನ್ನ ಮೊದಲ ತವರು ಪಂದ್ಯವನ್ನು ಆಡಲಿದೆ.

Source : https://tv9kannada.com/sports/cricket-news/rcb-unbox-2025-tickets-sold-out-psr-987786.html

Leave a Reply

Your email address will not be published. Required fields are marked *