ಕೇವಲ ಅಂಕಗಳತ್ತ ಗಮನ ಹರಿಸದೆ,ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಸಹಕಾರ ಅಗತ್ಯ: ಪ್ರಭಂಜನ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು.09 : ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ ಬರೀ ಅಂಕಗಳತ್ತ ಗಮನ ನೀಡುತ್ತಿರುವ ಪೋಷಕರು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸಹಕಾರ ನೀಡಬೇಕಿದೆ ಎಂದು ಭಜರಂಗದಳದ ದಕ್ಷಿಣ ಪ್ರಾಂತೀಯ ಸಂಚಾಲಕರಾದ ಪ್ರಭಂಜನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದಡಿಯಲ್ಲಿ ಸೋಮವಾರ ರಾತ್ರಿಯ ಹಮ್ಮಿಕೊಂಡಿದ್ದ ತೃತೀಯ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳಿಗೆ ಬರೀ ಅಭ್ಯಾಸವನ್ನು ಮಾಡಿಸಿ ಅಂಕಗಳನ್ನು ಗಳಿಸುವತ್ತ ಹೆಚ್ಚಿನ ಗಮನ ನೀಡುತ್ತಾರೆ ಹೊರೆತು ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಿಲ್ಲ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರುವುದರ ಮೂಲಕ ಸಂಸ್ಕಾರವನ್ನು ಕಲಿಸಬೇಕಿದೆ. ಸಂಸ್ಕಾರವನ್ನು ಕಲಿತ ಮಕ್ಕಳು ಮುಂದೆ ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ವೃದ್ದಾಶ್ರಮಕ್ಕೆ ಕಳುಹಿಸುವುದಿಲ್ಲ ಹಾಗೂ ನಿರ್ಲಕ್ಷ ಮಾಡುವುದಿಲ್ಲ ಎಂದರು.

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಪ್ರತಿ ವರ್ಷವೂ ಸಹಾ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ದೇವಸ್ಥಾನವನ್ನು ನಿರ್ಮಾಣ ಮಾಡುವುದು ಸುಲಭ ಆದರೆ ಅದನ್ನು ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ ಇಷ್ಠಾದರೂ ಸಹಾ ಈ ಸಮಿತಿಯವರು ಕಳೆದ 25 ವರ್ಷಗಳಿಂದ ಎಲ್ಲಿಯೂ ಸಹಾ ತಪ್ಪದೆ ನಿರಂತರವಾಗಿ ಸ್ವಾಮಿಯ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯವಾದದು, ಧಾರ್ಮಿಕ ಸಭಾ ಕಾರ್ಯಕ್ರಮಗಳು ಚೆನ್ನಾಗಿ ನಡೆಯಬೇಕಿದೆ. ಇಲ್ಲಿದೇ ಹೋದರೆ ನಮ್ಮ ಮಕ್ಕಳು ಸಂಸ್ಕಾರವನ್ನು ಕಲಿಯುವಂತ ವಾತಾವರಣ ಸಿಗುವುದಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವಂತ ವಾತಾವರಣ ಇಲ್ಲ, ಅಲ್ಲಿ ಕೇವಲ ಶಿಕ್ಷಣವನ್ನು ಕಲಿಸುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಸಂಸ್ಕಾರವನ್ನು ಕಲಿಯುವಂತ ವಾತಾವರಣ ಎಲ್ಲಿಯೂ ಸಹಾ ಸಿಗುತ್ತಿಲ್ಲ ಎಂದು ವಿಷಾಧಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾವುದರ ಮೂಲಕ ಸಂಸ್ಕಾರವನ್ನು ಕಲಿಯಬೇಕಿದೆ. ಅಯ್ಯಪ್ಪಸ್ವಾಮಿಯ ವ್ರತ ಬಹಳ ಮಹತ್ವವನ್ನು ಪಡೆದಿದೆ. ಹಿಂದೂ ಸಮಾಜ ಬೇರೆ ಬೇರೆ ಕಾರಣಗಳಿಂದ ಜಾತಿ ಮತ ಪಂಥ ಎಂದು ವಿಂಗಡಣೆಯಾಗುತ್ತಿದೆ, ಇದರಲ್ಲಿ ಕೆಲವು ಜನ ವಿವಿಧ ಕಾರಣಗಳಿಂದ ಮತಾಂತರವಾಗುತ್ತಿದ್ದಾರೆ. ಅವರನ್ನು ತಡೆದು ನಿಲ್ಲಿಸಿರುವುದು ಅಯ್ಯಪ್ಪಸ್ವಾಮಿ ವ್ರತವಾಗಿದೆ. ಈ ಹಿನ್ನಲೆಯಲ್ಲಿ ಹಿಂದೂ ಸಮಾಜ ಬಹಳ ಗಟ್ಟಿಯಾಗಿದೆ. ಇಂದಿನ ದಿನಮಾನದಲ್ಲಿ ದೇವಾಲಯಗಳನ್ನು ಕೇವಲ ಒಂದು ಜಾತಿಗೆ ಸೀಮಿತಮಾಡಲಾಗುತ್ತಿದೆ. ಅಯ್ಯಪ್ಪಸ್ವಾಮಿ ವ್ರತ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ, ಇದನ್ನು ಭಕ್ತಿಪೂರ್ವಕವಾಗಿ ಪಾಲನೆ ಮಾಡಿದರೆ ಸಾಕು ಎಲ್ಲರು ಅರ್ಹರಾಗುತ್ತಾರೆ. ಜಾತಿ ಮತ ಪಂಥವನ್ನು ಮೀರಿ ಎಲ್ಲರು ಮಾಲೆಯನ್ನು ಧರಿಸಿ ಅಯ್ಯಪ್ಪಸ್ವಾಮಿಯ ವ್ರತವನ್ನು ಆಚರಣೆ ಮಾಡಿ ವಾಪಾಸ್ಸ್ ತಮ್ಮ ಜಾತಿಗೆ ಹೋಗದೇ ಹಿಂದು ಧರ್ಮದಲ್ಲಿ ಉಳಿಯುತ್ತಿದ್ದಾರೆ ಎಂದರು.

ಧಾರ್ಮಿಕ ಸಂಸ್ಥೆಗಳು ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೇಂದ್ರಗಳಾಗಬೇಕಿದೆ, ನಮ್ಮಲ್ಲಿನ ಮಠಗಳು, ದೇವಾಲಯಗಳು, ಗುರುಗಳು, ಮಠಾಧಿಶರು ಸಂಸ್ಕಾರವನ್ನು ಕಲಿಸುವ ಕೇಂದ್ರಗಳಾಗಿವೆ. ಈ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅಗತ್ಯವಾಗಿದೆ ಅವರು ನೀಡಿದ ದಾನಿಗಳಿಂದ ಇಂದು ಉಪಯುಕ್ತವಾದ ಕಾರ್ಯವಾಗಿದೆ ಎಂದು ಪ್ರಭಂಜನ ತಿಳಿಸಿದರು.

ಮೇದೇಹಳ್ಳಿಯ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಉಜ್ಜಿನಿಸ್ವಾಮಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಅಯ್ಯಪ್ಪಸ್ವಾಮಿಯ ಭಕ್ತಾಧಿಗಳು ನಿಸ್ವಾರ್ಥದಿಂದ ಸ್ವಾಮಿಯ ಪೂಜೆಯನ್ನು ಮಾಡಿದಾಗ ತಮ್ಮಲ್ಲಿನ ಕಷ್ಟಗಳು ದೂರವಾಗಲಿದ್ದು,ಪುಣ್ಯ ಪ್ರಾಪ್ತಿಯಾಗಲಿದೆ. ಮಾನವ ಜನ್ಮ ಇದ್ದಾಗ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಸಂಸ್ಕಾರವನ್ನು ಕಲಿಯಬೇಕಿದೆ ಎಂದರು. 

ಐಶ್ವರ್ಯ ಪೋರ್ಟ್‍ನ ಆರುಣ್‍ಕುಮಾರ್ ಮಾತನಾಡಿ, ಇಲ್ಲಿ ಸ್ಥಳ ಮಹಿಮೆ ಇದೆ. ವರ್ಷ ಪೂರ್ಣವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಭಾಗವಹಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಿದೆ. ವರ್ಷದಿಂದ ವರ್ಷಕ್ಕೆ ಸ್ವಾಮಿಯ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮೇದೇಹಳ್ಳಿಯ ಎಂ.ರವಿಶಂಕರ್, ಬಿಜೆಪಿಯ ನಗರಾಧ್ಯಕ್ಷರಾದ ನವೀನ್ ಚಾಲುಕ್ಯ, ಎ.ವಿ.ಓ. ಪಿ.ಎಯ ಉಪಾಧ್ಯಕ್ಷರಾದ ಪಿ.ಎಲ್.ಸುರೇಶ್ ಬಾಬು, ಆದರ್ಶ ಟ್ರೇಡರ್ಸ್‍ನ ಪಟೇಲ್ ಶಿವಕುಮಾರ್, ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷರಾದ ಕೆ.ಎಸ್ ಆರುಣ್ ಕುಮಾರ್, ಜಯರಾಂ ಗ್ರೂಪ್ಸ್‍ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಜಿ.ಎಂ.ಸುರೇಶ್, ಕಾವೇರಿ ಟ್ರೇಡರ್ಸ್‍ನ ಟಿ.ರಾಮರೆಡ್ಡಿ, ಮಲ್ಲಿಕಾರ್ಜನ ಸ್ವಾಮಿ, ಮೋಹನ್ ಕುಮಾರ್, ಚಂದ್ರಶೇಖರ್, ಸೂರಪ್ಪ, ಮಂಜುನಾಥ್, ಪ್ರಧಾನ ಅರ್ಚಕರಾದ ಸತೀಶ್ ಶರ್ಮ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುನೀತ್‍ಜೋಗಿ ಪ್ರಾರ್ಥಿಸಿದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ವೆಂಕಟೇಶ್ ವಂದಿಸಿದರು, ಯಶವಂತ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಗ್ಗೆ ಆದಿವಾಸಹೋಮ, ವಲಿಯಪಾಣಿ, ಮಹಾ ಕಳಶಾಭೀಷೇಕ, ಪರಿಕಳಶಾಭಿಷೇಕ, ಸ್ಕಂದ ಹೋಮ ಹಾಗೂ ಅಶ್ಲೇಷ ಬಲಿ ಪೂಜೆ ಮಹಾ ಮಂಗಳಾರತಿ ಹೋಮ ನೆರವೇರಿದ್ದು, ಸಂಜೆ ಶ್ರೀಸ್ಕಂದ ಹೋಮ, ಆಶ್ಲೇಷ ಬಲಿ ಪೂಜೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಿತು.

ಭಕ್ತಿ ಕುಸುಮಾಂಜಲಿ ಕಾರ್ಯಕ್ರಮದಡಿ ಮಹೇಂದ್ರದಾಸ್, ರಮೇಶ್‍ಚಂದ್ರ, ಸುನೀತ್‍ಜೋಗಿ ಹಾಗೂ ರಮೇಶಚಂದ್ರರವರಿಂದ ಸಂಗೀತ ಕಾರ್ಯಕ್ರಮ ನೆಡೆಯಿತು. ದಿನಾಂಕ 10-7-2024 ರಂದು ಬೆಳಿಗ್ಗೆ 7:53ರಿಂದ 8.41ರವರೆಗೆ ಸಲ್ಲುವ ಕರ್ಕಾಟಕ ಲಗ್ನದ ಶುಭ ಮಹೂರ್ತ ದಲ್ಲಿ ಪ್ರತಿಷ್ಠಾಪನೆ ಬ್ರಹ್ಮಕಳಸಾಭಿಷೇಕ, ಕುಂಬೇಷ ಕಳಶಾಭಿಷೇಕ, ನಿದ್ರಾಕಳಶಾಭಿಷೇಕ, ಪ್ರತಿಷ್ಠಾಬಲಿ ಹಾಗೂ ಚಂಡಿಕಾ ಹೋಮವನ್ನು ನೆರವೇರಿಸಲಾಗುವುದು. ಈ ಮಹಾ ಕುಂಭಾಭಿಷೇಕದ ಉದ್ಘಾಟನೆಯನ್ನು ಬೆಂಗಳೂರಿನ ಡಾಕ್ಟರ್ ಕಾರ್ತಿಕ್ ಎಚ್.ಎಸ್. ನೆರವೇರಿಸಲಿದ್ದಾರೆ. ಆ ದಿನದಂದು ಸಮಸ್ತ ಭಕ್ತಾದಿಗಳಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೂ ಸಾರ್ವಜನಿಕ ಮಹಾ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

Leave a Reply

Your email address will not be published. Required fields are marked *