“ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆಯಬಹುದು” : ಜಗದೀಶ್‌ ಶೆಟ್ಟರ್‌

Hubballi- Dharwad: ಭಾರೀ ಕುತೂಹಲದ ಬಳಿಕ ಕೊನೆಗೂ ನಿನ್ನೆ ರಾತ್ರಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿತು. ಆದರೆ ಈ ಬಾರಿ ಕೆಲವು ಘಟಾನುಘಟಿ ನಾಯರಿಗೆ ಟಿಕೆಟ್‌ ಕಜೈ ತಪ್ಪಿದೆ. ಅಲ್ಲದೇ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ಅವರ ಬೇಸರಕ್ಕೆ ಕಾರಣವಾಗಿದೆ. 

ಹುಬ್ಬಳ್ಳಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೆಹಲಿಗೆ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ್ ಶೆಟ್ಟರ್ ದೆಹಲಿಗೆ ಪ್ರಯಾಣ ಬೆಳೆಸಿದರು. ನಿನ್ನೆ ಬಿಜೆಪಿ ಹೈಕಮಾಂಡ್‌ ರಿಲೀಸ್‌ ಮಾಡಿದ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ. ಅಲ್ಲದೇ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ದಟ್ಟವಾಗಿರುವ ಕಾರಣ ಅವರ ಅಭಿಮಾನಿಗಳು ನಿವಾಸಕ್ಕೆ ಆಗಮಿಸಿ ಅಸಮಾಧಾನ ಹೊರಹಾಕಿದ್ದಾರೆ.‌ 

ಈ ಬಗ್ಗೆ ಶೆಟ್ಟರ್‌ ಕೂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸಂಜೆ ಫೋನ್ ಮಾಡಿ ದೆಹಲಿಗೆ ಬರುವಂತೆ ಬುಲಾವ್ ಶೆಟ್ಟರ್‌ಗೆ ನೀಡಿದ್ದರು. ಶೆಟ್ಟರ್ ದೂರವಾಣಿಯಲ್ಲಿಯೇ ನಿನ್ನೆ ನಡ್ಡಾ ಜೊತೆಗೆ ಮಾತನಾಡಿದ್ದು, ಅವರ ಸ್ಟ್ಯಾಂಡ್ ತಿಳಿಸಿದ್ದರು ಎನ್ನಲಾಗಿದೆ. ಇದೀಗ ಟಿಕೆಟ್ ಸಿಗೋ ಹೋಪ್ಸ್ ಇಟ್ಟುಕೊಂಡು ದೆಹಲಿಗೆ ಹೊರಟಿದ್ದಾರೆ. 

ಈ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್, ರಾಷ್ಟ್ರೀಯ ನಾಯಕರನ್ನ ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ. ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ. ನಿನ್ನೆ ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನಗೆ ವರಿಷ್ಠರು ಸ್ಪಷ್ಟತೆಯನ್ನ ತಿಳಿಸಲಿದ್ದಾರೆ. ಒಬ್ಬ ಶಾಸಕನಾಗಿ ಎರಡು ವರ್ಷಗಳಿಂದ ಯಾವುದೇ ಸ್ಥಾನಮಾನ ಇಲ್ಲದೇ ಅಭಿವೃದ್ದಿ ಕೆಲಸಗಳನ್ನ ಮಾಡಿದ್ದೇನೆ. ಸಚಿವ ಸ್ಥಾನ ಇಲ್ಲದೆಯೂ ಕೆಲಸ ಮಾಡಬಹುದು ಎಂಬುದು ತೋರಿಸಿಕೊಟ್ಟಿದ್ದೇನೆ ಎಂದು ಹೇಳಿದರು. 

ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆದುಕೊಳ್ಳಬಹುದು. ಹೀಗಾಗಿ ಯಾರೇ ಆಗಲಿ ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ಹೊರ ಹೋಗಬೇಕು. ಈ ರೀತಿ ಹೊರ ಹೋಗುವುದು ಸರಿಯಲ್ಲ ಎಂದು ಹೇಳಿದ್ದು, ಇದೇ ಮೊದಲ ಬಾರಿಗೆ ರಾಜಕೀಯ ನಿವೃತ್ತಿಯ ಬಗ್ಗೆ ಶೆಟ್ಟರ್ ಮಾತನಾಡಿದ್ದು ಅಚ್ಚರಿ ಮೂಡಿಸಿದೆ. 

ನನ್ನ ಸಾಫ್ಟ್ ಕಾರ್ನರ್ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ. ವರಿಷ್ಠರಿಂದ ನನಗೆ ಸಕಾರಾತ್ಮಕ‌ ಸ್ಪಂದನೆ ಸಿಗುವ ಭರವಸೆ ಇದೆ ಎಂದು ಹೇಳಿದ್ದು, ಶೆಟ್ಟರ್‌ ಮಾತು ಕುತೂಹಲ ಕೆರಳಿಸಿದೆ. 

Source: https://zeenews.india.com/kannada/karnataka-assembly-election/hubballi-dharwad-central-bjp-ticket-aspirant-jagdish-shettar-went-to-delhi-128340

Leave a Reply

Your email address will not be published. Required fields are marked *