ಬಸವ ಸಂಸ್ಕೃತಿ ಅಭಿಯಾನ : ಮುರುಘಾ ಮಠದಲ್ಲಿ ಜೂನ್ 28 ರಾಜ್ಯ ಮಟ್ಟದ ಪೂರ್ವಭಾವಿ ಸಭೆ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 26 ಬಸವ ಸಂಸ್ಕೃತಿ ಅಭಿಯಾನದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯನ್ನು ಇದೇ ತಿಂಗಳ 28ರಂದು ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಮಹತ್ವದ ಸಭೆಗೆ ಪ್ರತಿ ಜಿಲ್ಲೆಗಳಿಂದ ಮೂರು ಜನ ಪ್ರತಿನಿಧಿಗಳು ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್ ಇತ್ತೀಚೆಗೆ ಶ್ರೀ ಮಠಕ್ಕೆ ಭೇಟಿ ನೀಡಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ. ಬಸವಕುಮಾರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿದರು.

ಡಾ. ಬಸವಕುಮಾರ ಸ್ವಾಮೀಜಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಪೂರ್ವಭಾವಿ ಸಭೆಯನ್ನು ಯಶಸ್ವೀಯಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. “ನಾವೆಲ್ಲ ಮಠಾಧೀಶರು ಸೇರಿದಂತೆ ಎಲ್ಲರೂ ಭಾಗವಹಿಸಿದಾಗ ಅಭಿಯಾನವನ್ನು ಸಫಲವಾಗಿ ನಡೆಸಿ ಬಸವ ತತ್ವವನ್ನು ಜನ ಮನಸಕ್ಕೆ ಮುಟ್ಟಿಸಲು ಸಾದ್ಯವಾಗುತ್ತದೆಯೆಂದು,” ಹೇಳಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣರಾದ ಕೆಂಚವೀರಪ್ಪ, ಉಪಾಧ್ಯಕ್ಷರಾರಾಗಿ ಶಿವಲಿಂಗಪ್ಪ, ಬಸವರಾಜ ಕಟ್ಟಿ, ಪ್ರಧಾನ ಕಾರ್ಯದರ್ಶಿ ನಂದೀಶ ಜಿ. ಟಿ., ಲಿಂಗಾಯತ ಮುಖಂಡರಾದ ಎಸ್. ಷಣ್ಮುಖಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸೆಪ್ಟೆಂಬರ 1ರಿಂದ ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ನಾಡಿನ ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಬಸವ ಸಂಸ್ಕೃತಿ ಅಭಿಯಾನ ಬೀದರದಿಂದ ಬೆಂಗಳೂರವರೆಗೆ ನಡೆಯಲಿದೆ. ಸೆಪ್ಟೆಂಬರ್ 16ಕ್ಕೆ ಚಿತ್ರದುರ್ಗಕ್ಕೆ ಅಭಿಯಾನ ಬರಲಿದೆ. ಜಾಗತಿಕ ಲಿಂಗಾಯತ ಮಹಾ ಸಭಾದ ಮೂರನೇ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯ ಸಭೆಯೂ ಚಿತ್ರದುರ್ಗದಲ್ಲಿ ಸೆಪ್ಟೆಂಬರ್ 28 ನಡೆಯಲಿದೆ.

Leave a Reply

Your email address will not be published. Required fields are marked *