ಚಿತ್ರದುರ್ಗದಲ್ಲಿ ಕಡೇ ಕಾರ್ತಿಕ ದೀಪೋತ್ಸವ ಸಂಭ್ರಮ: ದುರ್ಗದ ಶಕ್ತಿದೇವತೆಗಳ ಭವ್ಯ ಮೆರವಣಿಗೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 24

ಕಡೇ ಕಾರ್ತಿಕ ದೀಪೋತ್ಸವದ ಅಂಗವಾಗಿ ನಗರ ದೇವತೆಯರಾದ ಶ್ರೀ ಏಕನಾಥೇಶ್ವರಿ, ಶ್ರೀ ತಿಪ್ಪ್ಪಿನಘಟ್ಟಮ್ಮ, ಶ್ರೀ ಅಂತರಘಟ್ಟಮ್ಮ ದೇವಿಯರ ಭವ್ಯ ಮೆರವಣಿಗೆ ಮಂಗಳವಾರ ನಗರದ ರಾಜಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.

ದುರ್ಗದ ಶಕ್ತಿದೇವತೆಗಳ ಪುರ ಪ್ರವೇಶಕ್ಕೆ ಭಕ್ತರು ಮನೆಗಳ ಮುಂದೆ ನೀರು ಹಾಕಿ, ರಂಗವಲ್ಲಿ ಹಾಕಿ ಸ್ವಾಗತಿಸಿದರು. ನಗರದ ಕರುವಿನಕಟ್ಟೆ ರಸ್ತೆಯ ಏಕನಾಥೇಶ್ವರಿ ಪಾದಗುಡಿ ಮುಂಭಾಗ ಮೂರು ದೇವತೆಗಳ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿ ಟ್ರಾಕ್ಟರ್‍ನಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.

ದೇವಿಯರ ಮೆರವಣಿಗೆಗೆ ತಮಟೆ, ಡೊಳ್ಳು, ಉರುಮೆ, ಬ್ಯಾಂಡ್ ಸೆಟ್ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ಯುವಕರು ವಾದ್ಯಗಳ ಸದ್ದಿಗೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತರು ಅಲಂಕೃತ ದೇವಿಯರ ಮೂರ್ತಿ ಕಣ್ತುಂಬಿಕೊಂಡರು.

ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಗಾಂಧಿ ವೃತ್ತ, ಧರ್ಮಶಾಲಾ, ಉಜ್ಜಿನಿ ಮಠದ ರಸ್ತೆ ಸೇರಿ ಹಲವೆಡೆ ಸಂಚರಿಸಿದ ನಂತರ ಪುನಃ ಮೂರ್ತಿಗಳನ್ನು ದೇಗುಲಕ್ಕೆ ಕರೆತರಲಾಯಿತು.

ಡಿ. 24ರ ಇಂದು ವಿಶೇಷ ಪೂಜೆ, ದೀಪೋತ್ಸವ, ಪ್ರಸಾದ ವಿತರಣೆ ನಡೆದರೆ ಡಿ. 25ರಂದು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ ಎಂದು ಕಾರ್ತಿಕ ಮಹೋತ್ಸವ ಸಮಿತಿ ತಿಳಿಸಿದೆ.

Views: 22

Leave a Reply

Your email address will not be published. Required fields are marked *