✍️ ರಚಿತ . ಡಿ
ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಭಾವನೆಗಳ ಪ್ರತಿಬಿಂಬವಾಗಿದೆ. ಕಾವೇರಿ ನದಿಯ ಸೊಬಗು, ಸಹ್ಯಾದ್ರಿಯ ಹಸಿರು ಸಿರಿ, ಹಂಪಿ-ಬೇಲೂರಿನ ಶಿಲ್ಪಕಲೆ, ಮೈಸೂರು ವೈಭವ ಹಾಗೂ ಕನ್ನಡ ಸಾಹಿತ್ಯದ ಮಹಾನ್ ಕವಿಗಳ ಕೊಡುಗೆಯನ್ನು ಸುಂದರ ಪದಗಳ ಮೂಲಕ ಬಿಂಬಿಸುವ ಕವನವೇ “ಕನ್ನಡದ ಸಿರಿಗಂಧ”.
ಕನ್ನಡ ನಾಡು-ನುಡಿಯ ಮೇಲಿನ ಅಭಿಮಾನ, ಕನ್ನಡ ಭಾಷೆಯ ಸೊಗಡು ಮತ್ತು ಕನ್ನಡಿಗರ ಹೆಮ್ಮೆಯನ್ನು ಸಾರುವ ಈ ಕವನವನ್ನು ರಚಿತ ಡಿ ಅವರು ರಚಿಸಿದ್ದಾರೆ. ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಕನ್ನಡದ ಜ್ಯೋತಿ ಸದಾ ಬೆಳಗಲಿ ಎಂಬ ಆಶಯವನ್ನು ಈ ಕವನ ವ್ಯಕ್ತಪಡಿಸುತ್ತದೆ.
“ಕನ್ನಡದ ಸಿರಿಗಂಧ”
ಕರುನಾಡ ಮಣ್ಣಿದು ಪುಣ್ಯದ ಗಣಿ
ಕಿವಿಗಿಂಪಾಗಿದೆ ಈ ಕನ್ನಡದ ದನಿ
ಕಾವೇರಿ ಹರಿಯುವ ಪವಿತ್ರ ಕ್ಷೇತ್ರ
ಭವ್ಯ ಇತಿಹಾಸದ ಚಂದದ ಚಿತ್ರ
ಹಸಿರು ಸೀರೆಯುಟ್ಟ ಸಹ್ಯಾದ್ರಿಯ ಸಾಲು
ಇಲ್ಲಿ ಹರಿವುದು ಪ್ರೀತಿಯ ಕ್ಷೀರದ ಹಾಲು
ಶಿಲ್ಪಕಲೆಯ ಬೀಡು ಹಂಪಿ ಬೇಲೂರು
ಸಂಸ್ಕೃತಿಯ ಹೊತ್ತು ನಿಂತಿದೆ ಮೈಸೂರು
ಪಂಪ ರನ್ನರ ಜ್ಞಾನದ ಜ್ಯೋತಿ
ಕುವೆಂಪು ಬೇಂದ್ರೇಯ ಭಾವದ ಪ್ರೀತಿ
ವಚನ ಕೀರ್ತನೆಯ ಭಕ್ತಿ ಸುಧೆಯು
ನಮ್ಮ ಬಾಳಿಗೆ ದಾರಿದೀಪದ ಕಥೆಯು
ಅಮ್ಮ ಎಂದು ಕರೆಯುವ ಮೊದಲ ನುಡಿಯು
ನಮ್ಮ ಉಸಿರಿನಲ್ಲಿ ಬೆರೆತ ದಿವ್ಯ ಶಕ್ತಿಯು
ಕಸ್ತೂರಿಗಿಂತಲೂ ಪರಿಮಳದ ಭಾಷೆ
ಜಗದಗಲ ಹರಡಲಿ ಎಂಬುದೇ ಆಶೆ
ಭವ್ಯ ಪರಂಪರೆಯ ಹೆಮ್ಮೆಯ ನಾಡು
ಶಾಂತಿ ಸೌಹಾರ್ದದ ಸುಂದರ ಗೂಡು
ಕೈ ಮುಗಿದು ಒಳಗೆ ಬಾ ಯೋಗಿ ಎನ್ನುವ
ವಿಶ್ವಮಾನವ ಸಂದೇಶವ ಸಾರುವ
ಎಲ್ಲೆ ಇರಲಿ ಹೇಗೆಯೇ ಇರಲಿ
ಕನ್ನಡದ ಜ್ಯೋತಿ ಎದೆಯಲಿ ಬೆಳಗಲಿ
ನುಡಿಯೇ ನಮ್ಮಯ ಪ್ರಾಣದ ಉಸಿರು
ಅಜರಾಮರವಾಗಲಿ ಕನ್ನಡದ ಹೆಸರು

ರಚಿತ ಡಿ ಬಂಗಾರಕ್ಕನಹಳ್ಳಿ
ಬಿ.ಕಾಂ
ಎಸ್.ಆರ್.ಎಸ್ ಪ್ರಥಮ ದರ್ಜೆ ಕಾಲೇಜು
ಚಿತ್ರದುರ್ಗ