ಕ್ಯಾನ್ಸರ್ ಗೆದ್ದ​ ಕರುನಾಡ ಚಕ್ರವರ್ತಿ : ಡಬಲ್​ ಪವರ್​​ನೊಂದಿಗೆ ಬರುತ್ತೇನೆಂದ ಶಿವರಾಜ್​ಕುಮಾರ್​.

SHIVARAJKUMAR HEALTH UPDATES : ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದ ಶಿವರಾಜ್​ಕುಮಾರ್​ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು. ಇದೀಗ ವೈದ್ಯರು ಅಧಿಕೃತವಾಗಿ ಕ್ಯಾನ್ಸರ್​ ಫ್ರೀ ಎಂದು ಘೋಷಿಸಿದ್ದಾರೆ ಎಂದು ಗೀತಾ ಶಿವರಾಜ್​ಕುಮಾರ್ ತಿಳಿಸಿದ್ದಾರೆ.

ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​ಕುಮಾರ್ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಯಶಸ್ವಿ ಸರ್ಜರಿ ಬಳಿಕ ಪತ್ನಿ ಗೀತಾ ಶಿವರಾಜ್​ಕುಮಾರ್, ಬಾಮೈದ ಮಧು ಬಂಗಾರಪ್ಪ ಮತ್ತು ವೈದ್ಯರು ವಿಡಿಯೋ ಸಂದೇಶ ಹಂಚಿಕೊಂಡಿದ್ದರು. ಜನಪ್ರಿಯ ನಟ ಚೇತರಿಸಿಕೊಳ್ಳುತ್ತಿದ್ದು, ಸದ್ಯ ಗೀತಾ ಮತ್ತು ಶಿವರಾಜ್​ಕುಮಾರ್ ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ್ದಾರೆ.

”ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ನಿಮ್ಮ ಪ್ರಾರ್ಥನೆ ಫಲಿಸಿತು. ರಿಪೋರ್ಟ್​​​ಗಳೆಲ್ಲವೂ ನೆಗೆಟಿವ್​ ಎಂದು ಬಂದಿದೆ. ಇದೀಗ ವೈದ್ಯರು ಅಧಿಕೃತವಾಗಿ ಕ್ಯಾನ್ಸರ್​ ಫ್ರೀ ಎಂದು ಘೋಷಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದ ಶಿವರಾಜ್​ಕುಮಾರ್​ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು. ನಾನಿದನ್ನು ನನ್ನ ಬದುಕಲ್ಲಿ ಎಂದಿಗೂ ಮರೆಯೋದಿಲ್ಲ” – ಗೀತಾ ಶಿವರಾಜ್​ಕುಮಾರ್.

”ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಮಾತಾಡ್​ಬೇಕಾದ್ರೆ ಎಲ್ಲಿ ಭಾವುಕನಾಗುತ್ತೇನೆಂದು ಸ್ವಲ್ಪ ಭಯ ಆಗುತ್ತೆ. ಯಾಕಂದ್ರೆ ಅಲ್ಲಿಂದ ಹೊರಡಬೇಕಾದ್ರೆ ಸ್ವಲ್ಪ ಎಮೋಶನಲ್​ ಆಗಿದ್ದೆ. ಮನುಷ್ಯನಿಗೆ ಭಯ ಅನ್ನೋದು ಇದ್ದೇ ಇರುತ್ತೆ. ಆ ಭಯ ನೀಗಿಸೋಕ್ಕೆಂದೇ ಅಭಿಮಾನಿ ದೇವರುಗಳಿರುತ್ತಾರೆ. ಸಹನಟರಿರುತ್ತಾರೆ, ಸ್ನೀಹಿತರು ಇರುತ್ತಾರೆ, ಸಂಬಂಧಿಕರಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟ್ರಾಂಗ್​ ಹ್ಯಾಂಡ್​ ವೈದ್ಯರಿರುತ್ತಾರೆ. ಹೀಗೆ ಪ್ರತಿಯೊಬ್ಬರು ನೋಡಿಕೊಂಡ ರೀತಿ ನನಗೆ ಧೈರ್ಯ ಕೊಟ್ಟಿತು” – ನಟ ಶಿವರಾಜ್​ಕುಮಾರ್​.

ಮಾತು ಮುಂದುವರಿಸಿದ ನಟ, ಎಲ್ಲರ ಸಹಕಾರದಿಂದ ಆರಾಮಾಗಿ ಇದ್ದೆ, ಶೂಟಿಂಗ್​ಗೆ ಹೋಗುತ್ತಿದ್ದೆ. ಅದ್ಯಾವ ಜೋಶ್​ ಬಂತೋ ನನಗೂ ಗೊತ್ತಿಲ್ಲ. ಹಾಗೆ ನೋಡೋಕ್ಕೋದ್ರೆ ’45’ ಇಡೀ ಸಿನಿಮಾದ ಚಿತ್ರೀಕರಣವನ್ನು ಕಿಮೋ ಥೆರಪಿ ಮಾಡುತ್ತಿರುವಾಗಲೇ ಮಾಡಿದ್ದೇನೆ. ಹೀಗೆ ಎಲ್ಲವೂ ಆಯ್ತು. ಹೊರಡೋ ಸಮು ಹತ್ತಿರ ಬರುತ್ತಿದ್ದಂತೆ ಟೆನ್ಷನ್​​ ಹೆಚ್ಚಾಯಿತು. ಬರುವ ಮುನ್ನ ಎಲ್ಲರೂ ನನಗೆ ಧೈರ್ಯ ತುಂಬಿದ್ರು. ವಿಶೇಷವಾಗಿ ಗೀತಾ ಬಗ್ಗೆ ಹೇಳಲೇಬೇಕು. ಗೀತಾ ಇಲ್ಲದೇ ಶಿವರಾಜ್​​ಕುಮಾರ್ ಇಲ್ಲ. ಮಧು ಬಂಗಾರಪ್ಪ ನನ್ನನ್ನು ಮಗುವಿನಂತೆ ನೋಡಿಕೊಂಡಿದ್ದಾರೆ. ಹೀಗೆ ಎಲ್ಲರ ಸಹಕಾರ ದೊಡ್ಡ ಮಟ್ಟದಲ್ಲಿತ್ತು. ನಿಮ್ಮೆಲ್ಲರ ಪ್ರಾರ್ಥನೆ, ಶುಭಹಾರೈಕೆಯನ್ನು ನಾನೆಂದಿಗೂ ಮರೆಯೋದಿಲ್ಲ. ಶೀಘ್ರವೇ ವಾಪಸ್ಸಾಗುತ್ತೇನೆ. ಐ ವಿಲ್​ ಬಿ ಬ್ಯಾಕ್​. ಡಬಲ್​ ಪವರ್​​ನೊಂದಿಗೆ ಬರುತ್ತೇನೆ. ನಿಮ್ಮ ಆಶೀರ್ವಾದ ಇರೋವರೆಗೂ ನಾನು ಖಂಡಿತಾ ಚೆನ್ನಾಗಿರುತ್ತೇನೆ. ಈ ಪ್ರೀತಿ ವಿಶ್ವಾಸವನ್ನು ನಾನೆಂದಿಗೂ ಮರೆಯೋದಿಲ್ಲ. ಲವ್​ ಯೂ ಆಲ್​ ಎಂದು ತಿಳಿಸಿದ್ದಾರೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟನ ಚಿಕಿತ್ಸೆ ಯಶಸ್ವಿಯಾಗಲೆಂದು ರಾಜ್ಯದ ಹಲವೆಡೆ ಉರುಳು ಸೇವೆ, ಕೇಶ ಮುಂಡನೆ ಹಾಗೂ ಮಹಾ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜೆಗಳು ನಡೆದಿದ್ದವು.

ಸರ್ಜರಿ ಬಳಿಕ ವಿಡಿಯೋ ಹಂಚಿಕೊಂಡಿದ್ದ ಕುಟುಂಬ, ”ಡಾ.ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಸರ್ಜರಿ ನಡೆದಿದೆ. ಶಸ್ತ್ರಚಿಕಿತ್ಸೆ ಸಂದರ್ಭ ಶಿವಣ್ಣನ ಆರೋಗ್ಯ ಸ್ಥಿರವಾಗಿತ್ತು. ಸದ್ಯ ಅಗತ್ಯ ಚಿಕಿತ್ಸೆ ಮುಂದುವರೆಸಲಾಗಿದೆ. ಪರಿಣಿತ ವೈದ್ಯ ಹಾಗೂ ಆರೋಗ್ಯ ಸಿಬ್ಬಂದಿಯ ತಂಡದಿಂದ ಅತ್ಯುತ್ತಮ ಆರೈಕೆ ಸಾಗಿದೆ. ಅಭಿಮಾನಿಗಳು, ಸಹೋದ್ಯೋಗಿಗಳು ಹಾಗೂ ಮಾಧ್ಯಮಗಳು ತೋರಿದ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇವೆ” ಎಂದಿದ್ದರು.

Source : https://www.etvbharat.com/kn/!entertainment/shivarajkumar-is-cancer-free-now-couple-shares-video-karnataka-news-kas25010102213

Leave a Reply

Your email address will not be published. Required fields are marked *