ಪಿಡಿಒ ಹುದ್ದೆ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧ, KPSC ಇಂದ ಲೇಟೆಸ್ಟ್‌ ಸ್ಪಷ್ಟನೆಯೊಂದು ಪ್ರಕಟ.

ಹೈಲೈಟ್ಸ್‌:

  • ಪಿಡಿಒ ಪರೀಕ್ಷೆಗಳು ನಾಳೆಯಿಂದ ಆರಂಭ.
  • ಕನ್ನಡ ಭಾಷಾ ಪರೀಕ್ಷೆ ಬರೆಯುವವರಿಗೆ ಸ್ಪಷ್ಟನೆ ಬಿಡುಗಡೆ.
  • ನ.16, ಡಿ.12 ರಂದು ಪರೀಕ್ಷೆ ನಿಗಧಿಮಾಡಲಾಗಿದೆ.

2024ನೇ ಸಾಲಿನ ಏಪ್ರಿಲ್‌ನಲ್ಲಿ ಅಧಿಸೂಚಿಸಿರುವ 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಫಿಕೇಶನ್‌ ಸಂಬಂಧ, ಇದೀಗ ಲೇಟೆಸ್ಟ್‌ ಪ್ರಕಟಣೆಯೊಂದನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯ PDO ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಈ ಮಾಹಿತಿಗಳನ್ನು ಕಡ್ಡಾಯ ಓದಿಕೊಳ್ಳಿ.

ಕೆಪಿಎಸ್‌ಸಿ ಇದೀಗ ಬಿಡುಗಡೆ ಮಾಡಲಾದ ತನ್ನ ಲೇಟೆಸ್ಟ್‌ ನೋಟಿಸ್‌ನಲ್ಲಿ ‘ ಪಿಡಿಎಒ – ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದದ-97 ಹುದ್ದೆಗಳಿಗೆ, ದಿನಾಂಕ: 16.11.2024 ರಂದು ಕನ್ನಡ ಭಾಷಾ ಪರೀಕ್ಷೆಯನ್ನು ಹಾಗೂ ದಿನಾಂಕ:17.11.2024ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ. ಹಾಗೂ ಉಳಿಕೆ ಮೂಲ ವೃಂದದ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ: 07.12.2024ರಂದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ:08.12.2024ರಂದು ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಹುದ್ದೆಯ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ – ಈಗಾಗಲೇ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರಡಿ ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 29-11-2022ರಂದು ಹಾಗೂ ನಂತರ ನಡೆಸಲಾದ ಯಾವುದೇ ಕನ್ನಡ ಭಾಷಾ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಲ್ಲಿ ಸದರಿ ಫಲಿತಾಂಶವನ್ನ ಈ ಅಧಿಸೂಚನೆಯ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಪರಿಗಣಿಸಲಾಗುವುದು,” ಎಂದು ಕೆಪಿಎಸ್‌ಸಿ ತಿಳಿಸಿದೆ.

ಮೇಲಿನ ಕೆಪಿಎಸ್‌ಸಿ ಸೂಚನೆ ಪ್ರಕಾರ ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಿರುವ ಯಾರಾದರೂ 2022 ಅಥವಾ ನಂತರದಲ್ಲಿ ಕೆಪಿಎಸ್‌ಸಿ ನಡೆಸಿರುವ ಕನ್ನಡ ಭಾಷಾ ಪರೀಕ್ಷೆ ಬರೆದು, ಅದರಲ್ಲಿ ಗರಿಷ್ಠ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಿದ್ದರೆ ಉತ್ತೀರ್ಣರಾಗಿರುತ್ತೀರಿ. ಅವರು ಈ ಮೇಲೆ ಸೂಚಿಸಿದ ದಿನಾಂಕಗಳಂದು ಕನ್ನಡ ಭಾಷಾ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಹಾಗೂ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಬಾರಿ ಈ ಪರೀಕ್ಷೆ ಬರೆದಿದ್ದಲ್ಲಿ, ಕೊನೆ ಬಾರಿ ಪರೀಕ್ಷೆ ಬರೆದು ಪಡೆದ ಅಂಕಗಳನ್ನು ಪರಿಗಣಿಸಲಿದೆ.

ಕರ್ನಾಟಕ ನಾಗರೀಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಏಕೆ? ಯಾರು ಈ ಪರೀಕ್ಷೆ ಬರೆಯುವುದು ಕಡ್ಡಾಯ?

ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳ ಪ್ರಕಾರ ರಾಜ್ಯದ ಸಿವಿಲ್‌ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸಲು ರಾಜ್ಯದ ಅಧಿಕೃತ ಭಾಷೆಯ ಅರಿವು ಕಡ್ಡಾಯ. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆ ಪಾಸ್‌ ಮಾಡುವುದು ಕಡ್ಡಾಯವಾಗಿದೆ.

ಹತ್ತನೇ ತರಗತಿ ಅಥವಾ ತತ್ಸಮಾನವೆಂದು ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಇತರೆ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಿಂತ ಮೇಲ್ಮಟ್ಟ ಯಾವುದೇ ಎಕ್ಸಾಮ್‌ನಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಮೇಲಿನ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರುವವರು ಈ ಪರೀಕ್ಷೆ ಬರೆಯಬೇಕಿಲ್ಲ. ಒಂದು ವೇಳೆ ಈ ಯಾವುದೇ ಶಿಕ್ಷಣದಲ್ಲಿ ಕನ್ನಡ ಭಾಷೆ ಓದಿ ಪಾಸಾಗದಿದ್ದಲ್ಲಿ ಕೆಪಿಎಸ್‌ಸಿ ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆದು ಪಾಸಾಗುವುದು ಕಡ್ಡಾಯ.

ಮೇಲೆ ತಿಳಿಸಿದಂತೆ ಒಂದು ವೇಳೆ ಯಾವುದೇ ಪರೀಕ್ಷೆಗಳು, ತರಗತಿಗಳಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದಿದ್ದಲ್ಲಿ, 150 ಅಂಕಗಳಿಗೆ ನಡೆಸುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಹಾಗೂ ಕನಿಷ್ಠ 50 ಅಂಕಗಳನ್ನು ಪಡೆದು ಪಾಸ್ ಆಗಲೇಬೇಕು. ಆದರೆ ಈ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಕೇವಲ ಅರ್ಹತೆಗೆ ಪರಿಗಣಿಸಲಾಗುತ್ತದೆ.

Source : https://vijaykarnataka.com/jobs/govt-jobs/kpsc-released-important-instructions-for-pdo-kannada-language-exam-candidates/articleshow/115328652.cms

Leave a Reply

Your email address will not be published. Required fields are marked *