![](https://samagrasuddi.co.in/wp-content/uploads/2025/01/image-99.png)
ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್‌ನಲ್ಲಿ (Los Angeles) ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಇಡೀ ಅಮೆರಿಕ ದೇಶವನ್ನೇ ತಲ್ಲಣಗೊಳಿಸಿದೆ. ಅಪಾರ ಆರ್ಥಿಕ ನಷ್ಟ ಉಂಟುಮಾಡಿರುವ ಕಾಡ್ಗಿಚ್ಚು 24 ಮಂದಿಯನ್ನ ಬಲಿಪಡೆದಿದೆ. ಲಕ್ಷಾಂತರ ಮಂದಿಯನ್ನ ಸ್ಥಳಾಂತರಗೊಳಿಸಲಾಗಿದೆ. ಈ ನಡುವೆ ಮಿಲಿಯನೇರ್‌ಗಳು (Millionaires) ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಲು ಗಂಟೆಗೆ ಲಕ್ಷ ಲಕ್ಷ ಹಣ ಪಾವತಿಸಲು ಮುಂದಾಗಿದ್ದಾರೆ.
![](https://cdn.publictv.in/wp-content/uploads/2025/01/Los-Angeles-Wildfire-2.jpg)
ಹೌದು. ಸರ್ಕಾರಿ ಅಗ್ನಿಶಾಮಕ ದಳಗಳು ಈಗಾಗಲೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಅಮೆರಿಕಕ್ಕೆ ಕೆನಡಾ, ಮೆಕ್ಸಿಕೊ ಸೇರಿದಂತೆ ಅನೇಕ ನೆರೆಯ ರಾಷ್ಟ್ರಗಳು ನೆರವು ನೀಡಿವೆ. ಹೀಗಾಗಿ ಖಾಸಗಿ ಅಗ್ನಿಶಾಮಕ ಸಿಬ್ಬಂದಿ (Fire services) ಮೊರೆ ಹೋಗಿರುವ ಮಿಲಿಯನೇರ್‌ಗಳು ಗಂಟೆ ಲೆಕ್ಕದಲ್ಲಿ ಲಕ್ಷ ಲಕ್ಷ ಹಣ ಪಾವತಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಮಿತಿಮೀರಿ ವ್ಯಾಪಿಸುತ್ತಿರುವ ಅಗ್ನಿಜ್ವಾಲೆಯಿಂದ ಆಸ್ತಿ ರಕ್ಷಿಸಲು ಶ್ರೀಮಂತರು ಗಂಟೆಗೆ 1.7 ಲಕ್ಷ ರೂ. (2,000 ಡಾಲರ್) ಪಾವತಿಸುತ್ತಿದ್ದಾರೆ. ಬೆಂಕಿಯ ಜ್ವಾಲೆ ಸಮೀಪಿಸಿದಂತೆಲ್ಲಾ ಮನೆ ಮೇಲಿಂದ ಹಾಗೂ ತಮಗೆ ಸೇರಿದ ಆಸ್ತಿಯ ಮೇಲೆ ನೀರು ಹಾಯಿಸುವುದು ಸಿಬ್ಬಂದಿಯ ಕೆಲಸವಾಗಿದೆ. ಈ ಸೇವೆಗೆ ಮಿಲಿಯನೇರ್‌ಗಳಿಂದ ಬೇಡಿಕೆ ಹೆಚ್ಚಾಗಿದೆ.
![](https://cdn.publictv.in/wp-content/uploads/2025/01/Wildfire.jpg)
ಉನ್ನತಮಟ್ಟದ ತನಿಖೆ:
ಕಾಡ್ಗಿಚ್ಚಿಗೆ ಕಾರಣವೇನು ಎಂಬುದನ್ನು ತಿಳಿಯಲು ಎಫ್‌ಬಿಐ ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳು ಸೇರಿ ಉನ್ನತ ಮಟ್ಟದ ತನಿಖೆಗೆ ಮುಂದಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.
ಪ್ರಮುಖ ಬೆಳವಣಿಗೆಗಳು
- ಕ್ಯಾಲಿಫೋರ್ನಿಯಾದ ಪಾಲಿಸೇಡ್ಸ್ ಪ್ರದೇಶವೊಂದರಲ್ಲೇ ಸುಟ್ಟು ಭಸ್ಮವಾದ ಭೂಪ್ರದೇಶದ ಪ್ರಮಾಣ 23,600 ಎಕ್ರೆಗೆ ಏರಿಕೆಯಾಗಿದೆ.
- 12,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿದೆ. ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಶ್ವಾನದಳದ ಮೂಲಕ ಶವಗಳ ಹುಟುಕಾಟ ಕಾರ್ಯನಡೆದಿದೆ. ಜ.7ರಂದು ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಈವರೆಗೆ ಅಂದಾಜು 150 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಟಾಗಿದೆ.
- ಬಿಸಿ ಗಾಳಿ, ಫೈರ್ನಾಡೋ (ಅಗ್ನಿ ಜ್ವಾಲೆ)ಗಳು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು, ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಅಮೆರಿಕದ ಇತಿಹಾಸದಲ್ಲೇ ಇದು ಕಂಡೂ ಕೇಳರಿಯದ ಕಾಡ್ಗಿಚ್ಚು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
- ಈಗಾಗಲೇ 1.53 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಅಲ್ಲದೇ ಇನ್ನೂ 57,000 ಕಟ್ಟಡಗಳು ಅಪಾಯದಲ್ಲಿವೆ. 1.66 ಲಕ್ಷ ಮಂದಿ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
- ಈ ಮಧ್ಯೆ ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ನಂದಿಸಲು ನೆರವು ಚಾಚಿವೆ.
Source : https://publictv.in/how-los-angeles-millionaires-are-paying-rs-1-7-lakh-an-hour-to-save-houses