ಮಂಡ್ಯ, ನವೆಂಬರ್ 18: ಸಕ್ಕರೆ ನಾಡು ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತಯಾರಿಯನ್ನು ನಡೆಸುತ್ತಿದೆ. ಡಿಸೆಂಬರ್ನಲ್ಲಿ ನಡೆಯಲಿರುವ ಕನ್ನಡ ಜಾತ್ರೆಗೆ ಪ್ರತಿನಿಧಿಗಳ ನೋಂದಣಿ ಆರಂಭವಾಗಿದೆ. ಆನ್ಲೈನ್ ಮೂಲಕ ನೋಂದಣಿ ನಡೆಯಲಿದ್ದು, ಶುಲ್ಕವನ್ನು ನಿಗದಿ ಮಾಡಲಾಗಿದೆ.

ಡಿಸೆಂಬರ್ 20, 21 ಮತ್ತು 22ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ. ಪ್ರತಿನಿಧಿಗಳ ನೋಂದಣಿಗೆ 600 ರೂ. ಶುಲ್ಕವನ್ನು ನಿಗದಿ ಮಾಡಲಾಗಿದ್ದು, 20 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.
ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, “ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗಿ ಭಾಗವಹಿಸಲು 600 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು” ಎಂದರು.
ನೋಂದಣಿ ಮಾಹಿತಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಆನ್ಲೈನ್ ಮೂಲಕವೇ ಶುಲ್ಕವನ್ನು ಪಾವತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೋಂದಣಿಯಾಗುವವರಿಗೆ ವಸತಿಯ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿಯನ್ನು ಆನ್ಲೈನ್ ಮೂಲಕವೇ ನೀಡಲಾಗುತ್ತದೆ.
ಮಂಡ್ಯ ಜಿಲ್ಲಾಡಳಿತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿಯನ್ನು ಆರಂಭಿಸಿದೆ. ಜಿಲ್ಲಾಧಿಕಾರಿ ಡಾ. ಕುಮಾರ ಸಮ್ಮೇಳನ ನಡೆಯಲಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗವಿರುವ ಮೈದಾನಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.