ಕೊಲೊಂಬೊ ಸೆ.23 : 2022ರಲ್ಲಿ ಎದುರಿಸಿದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮಾರ್ಕ್ಸ್ ವಾದಿ ನಾಯಕ ಅನುರ ಕುಮಾರ ದಿಸನಾಯಕೆ ಅವರು ಭಾನುವಾರ ಆಯ್ಕೆಯಾದರು.
ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಪ್ರಾಶಸ್ತ್ಯದ ಮತಗಳ ಮೂಲಕ ಮುನ್ನಡೆ ಹೆಚ್ಚಿಸಿಕೊಂಡು ಅನುರ ಕುಮಾರ ದಿಸನಾಯಕೆ ಗೆಲುವಿನ ದಡ ಸೇರಿದರು. ಚುನಾವಣೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಆರ್ಥಿಕ ಪುನಶ್ಚೇತನದ ಭರವಸೆ ನೀಡಿದ್ದ ನ್ಯಾಷನಲ್ ಪೀಪಲ್ ಪವರ್ (ಜೆಎನ್‌ಪಿ) ಪಕ್ಷದ ನಾಯಕ ದಿಸನಾಯಕೆ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ 56 ಲಕ್ಷ ಶೇಕಡ 42.3 ರಷ್ಟು ಮತ ಪಡೆಯುವ ಮೂಲಕ ಸಿಂಹಳಿ ದೇಶದ ಹತ್ತನೇ ಅಧ್ಯಕ್ಷರಾಗಿದ್ದರು. ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸಾ ಅವರು ಶೇಕಡ 32.8ರಷ್ಟು ಮತ ಪಡೆದುಕೊಂಡರು. ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಕೇವಲ ಶೇಕಡ 17ರಷ್ಟು ಮತ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದರು .
ಭ್ರಷ್ಟಾಚಾರ,ಸ್ವಜನ ಪಕ್ಷಪಾತ ನಿರ್ಧಾರಗಳಿಂದ 2022 ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅಂದಿನ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರನ್ನು ಹೊರಹಾಕಲು ದೇಶದಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿದ್ದವು. ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ಮತದಾನ ನಡೆಯಿತು. ಶ್ರೀಲಂಕಾ ರಾಜಕೀಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಎರಡನೇ ಸುತ್ತಿನಲ್ಲಿ ಪ್ರಾಶಸ್ತ್ಯದ ಮತಗಳ ಮೂಲಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.