
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 27: ಕರ್ನಾಟಕ ರಾಜ್ಯ ರೈತ ಸಂಘ ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಮೈಕ್ರೋ ಫೈನಾನ್ಸ್ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಜ. 29ರಂದು ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್ ಎದುರು ರೈತರ ಬೃಹತ್
ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷರಾದ ಕೆ.ಪಿ.ಭೂತಯ್ಯ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ
ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು
ಕಡಿತಗೊಳಿಸಿದೆ. ದೇಶದ ಮಹನೀಯರು ದೂರದೃಷ್ಟಿಯಿಂದ ಸಹಕಾರಿ ಚಳುವಳಿಯನ್ನು ಕಟ್ಟಿ ನಡೆಸಿದ ಸಹಕಾರ ಸಂಸ್ಥೆಗಳು
ದೇಶದ ಬೆನ್ನೆಲುಭಾಗಿ ದುಡಿಯುತ್ತಿದ್ದು, ಅದರಲ್ಲೂ ಮುಖ್ಯವಾಗಿ ನಮ್ಮ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸುವಲ್ಲಿ
ಮಹತ್ತರ ಪಾತ್ರವನ್ನು ವಹಿಸಿವೆ. ನಮ್ಮ ಹಾಲಿನ ಡೈರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿ.ಸಿ.ಸಿ. ಬ್ಯಾಂಕುಗಳು
ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಕಳೆದ 3 ವರ್ಷದಿಂದಲೂ ಪ್ರತಿವರ್ಷ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ
ಮೊತ್ತವನ್ನು ಕಡಿಮೆ ಮಾಡುತ್ತಲೇ ಬರುತ್ತಿದೆ. ಕೇಂದ್ರದ ಈ ನೀತಿಯಿಂದಾಗಿ ನಬಾರ್ಡ್ ರೈತರಿಗೆ ನೀಡುತ್ತಿದ್ದ, ಸಾಲದ ಮೊತ್ತವನ್ನು
ಕಡಿಮೆ ಮಾಡಿ ಈ ಸಾಲಿನಲ್ಲಿ ನಮ್ಮ ರಾಜ್ಯಕ್ಕೆ ನೀಡುತ್ತಿದ್ದ ಸಾಲವನ್ನು 58% ತಗ್ಗಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಇಡೀ ಕೃಷಿ
ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ವಹಿಸಲು ಹುನ್ನಾರ ನಡೆಸಿದೆ ಎಂದು
ದೂರಿದರು.
ನಬಾರ್ಡ್ ಕಳೆದ ವರ್ಷ ನಮ್ಮ ರಾಜ್ಯಕ್ಕೆ 5600 ಕೋಟಿ ರೂ. ನೀಡಿತ್ತು. ಈ ವರ್ಷ ಕೇವಲ 2340 ಕೋಟಿ ರೂ.ಗಳನ್ನು ನೀಡಿದೆ.
ಇದರಿಂದಾಗಿ 5 ಲಕ್ಷದ ವರೆವಿಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ನೀಡುತ್ತಿದ್ದ, ಅಲ್ಪಾವಧಿ ಸಾಲಕ್ಕೆ ಕುತ್ತು
ಬಂದಿದೆ. ಮತ್ತು ರಿಯಾಯತಿ ದರದಲ್ಲಿ 15.00 ಲಕ್ಷ ರೂ.ಗಳ ವರೆಗೆ ದೊರೆಯುತ್ತಿದ್ದ, ಮಧ್ಯಮ ಅವಧಿ ಮತ್ತು ದೀರ್ಘಾವಧಿ ಕೃಷಿ
ಸಾಲಕ ಹೊಡೆತ ಬೀಳುತ್ತದೆ. ಶೂನ್ಯ ಬಡ್ಡಿ ದರದಲ್ಲಿ ಸುಮಾರು 30 ಲಕ್ಷ ರೈತರು ಪಡೆಯುತ್ತಿದ್ದ ಸಾಲ ನಿಂತು. ಹೋಗುತ್ತದೆ. ರೈತರು
ಹೆಚ್ಚು ಬಡ್ಡಿ ತೆತ್ತು, ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಬೇಕು ಇಲ್ಲವೇ ಖಾಸಗಿ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಳ್ಳಬೇಕು. ಈ ಸುಳಿಗೆ
ರೈತ ಸಮುದಾಯ ಬಲಿಯಾದಲ್ಲಿ ಸ್ಥಿರಾಸ್ತಿಗಳು ಹರಾಜಾಗುತ್ತವೆ. ಈಗಾಗಲೇ ಪ್ರತಿ 36 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ
ಒಳಗಾಗುತ್ತಿದ್ದು, ಸರಣಿ ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ.ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಇತರೆ
ಕೃಷಿ ಪೂರ್ವಕ ಚಟುವಟಿಕೆಗೆ ನೀಡುತ್ತಿದ್ದ ಸಾಲದ ಸಹಾಯ ಧನ ಸಂಪೂರ್ಣ ಬಂದ್ ಆಗಲಿದೆ. ನಬಾರ್ಡ್ ವತಿಯಿಂದ ಗ್ರಾಮೀಣ
ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿದ್ದ ರಸ್ತೆ, ಇತರೆ ಕಾಮಗಾರಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ನಮ್ಮ ರಾಜ್ಯದಲ್ಲಿರುವ
ಹಲವಾರು ಡಿ.ಸಿ.ಸಿ. ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಭವಿಷ್ಯದಲ್ಲಿ ಸಂಪೂರ್ಣವಾಗಿ
ಸಂಪೂರ್ಣವಾಗಿ ಮುಚ್ಚಬೇಕಾಗುತ್ತದೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಧನಂಜಯ ಮಾತನಾಡಿ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಡೆಯೊಡ್ಡಿ ರಾಜ್ಯದಲ್ಲಿ
ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರೆ ದುಡಿಯುವ ಜನ
ಸಂಕಷ್ಟಕ್ಕೀಡಾಗಿದ್ದಾರೆ. ಈ ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿ ಮಹಿಳೆಯರು ಮಾನ ಮರ್ಯಾದೆಗೆ
ಅಂಜಿ ಆತ್ಮಹತ್ಯೆಗೆ ಒಳಗಾಗಿದ್ದಾರೆ ಮತ್ತು ಕಿರುಕುಳ ತಾಳಲಾರದೇ ಊರನ್ನೇ ತೊರೆಯುತ್ತಿದ್ದಾರೆ. ಈ ಮೈಕ್ರೋ ಫೈನಾನ್ಸ್‍ಗಳ
ಕಿರುಕುಳಗಳನ್ನು ತಡೆಗಟ್ಟಲೇಬೇಕಾಗಿದೆ. ಈ ಕಾರಣಗಳಿಗಾಗಿ ಜ.29ನೇ ಬುಧವಾರದಂದು ಬೆಳಿಗ್ಗೆ 11. ಗಂಟೆಗೆ ಬೆಂಗಳೂರಿನ
ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಿಂದಲೂ ಸಹಾ ಸುಮಾರು 150 ರಿಂದ 200 ಜನರು ಇದರಲ್ಲಿ ಭಾಗವಹಿಸಲಿದ್ದಾರೆ. 29 ರ ಬೆಳಿಗ್ಗೆ
ಚಿತ್ರದುರ್ಗದಿಂದ ಹೊರಡಲಾಗುವುದು ಎಂದು ಧನಂಜಯ ತಿಳಿಸಿದರು.
ಗೋಷ್ಟಿಯಲ್ಲಿ ಗೌರವ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ ಮಲ್ಲಾಪುರ, ಪ್ರಧಾನ ಕಾರ್ಯದರ್ಶಿ ಕುಮಾರ್ ಹಿರಿಯ ಉಪಾಧ್ಯಕ್ಷರಾದ
ರುದ್ರಸ್ವಾಮಿ ಚಿಕ್ಕಪ್ಪನಹಳ್ಳಿನ ಭಾಗವಹಿಸಿದ್ದರು
Views: 0