
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 04 : 1996ರ ಕಟ್ಟಡ ಕಾರ್ಮಿಕರ ಕಾಯ್ದೆ, ಸೆಸ್ ಕಾಯ್ದೆ ಉಳಿಸಿ, ಭ್ರಷ್ಟಾಚಾರದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಿ, ಮಂಡಳಿ ನಿಧಿ ಉಳಿಸಿ, ಎಂಬ ಹಲವು ಬೇಡಿಕೆಗಳಿಗಾಗಿ ರಾಜ್ಯದ ಕಟ್ಟಡ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಮಾರ್ಚ್ 05 ರಂದು
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅವರ ನಿರ್ಮಾಣ
ಕಾರ್ಮಿಕರ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ಸಿಐಟಿಯುನ ಜಿಲ್ಲಾ ಸಹ ಸಂಚಾಲಕರಾದ ಕಾಂ.ಸಿ.ಕೆ.ಗೌಸ್ ಪೀರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ
1996ರಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆ ಮತ್ತು ಸೆಸ್ ಕಾಯ್ದೆಗಳನ್ನು ಕೇಂದ್ರದ ಮೋದಿ ಸರ್ಕಾರವು, ಸಂಹಿತೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ರಫ್ತು ಮಾಡಿದೆ. ಈ ಸಂಹಿತೆಗಳನ್ನು ಜಾರಿ ಮಾಡುವಂತೆ ರಾಜ್ಯಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ರಾಜ್ಯ ಸರ್ಕಾರ ಒತ್ತಡ ಮಣಿಯದೇ, ರಾಜ್ಯದ ಕಾರ್ಮಿಕರ ಹಕ್ಕನ್ನು ಉಳಿಸಲು ಮುಂದಾಗಬೇಕೆಂದು ಆಗ್ರಹಿಸಲಾಯಿತು.
ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ದೇಶದಲ್ಲೇ ಶ್ರೀಮಂತ ಕಲ್ಯಾಣ ಮಂಡಳಿಯಾಗಿದೆ. ಆದರೆ ಕಲ್ಯಾಣ ಮಂಡಳಿಯು ಕಾರ್ಮಿಕರ ಕಲ್ಯಾಣಕ್ಕಾಗಿ ಖರ್ಚು ಮಾಡಬೇಕಾದ ಸಾವಿರಾರು ಕೋಟಿ ರೂಪಾಯಿ ನಿಧಿಯನ್ನು ಲೂಟಿ ಮಾಡಲಾಗುತ್ತಿದೆ. ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ ಘೋಷಿಸಲಾದ ಪಿಂಚಣಿ, ಮದುವೆ, ಸಹಜ ಸಾವು, ಅಪಘಾತ ಸಾವು, ಶೈಕ್ಷಣಿಕ ಧನ ಸಹಾಯ, ಹರಿಗೆಭತ್ಯೆ, ವೈದ್ಯಕೀಯ ವೆಚ್ಚ ಮರುಪಾವತಿ ಇತ್ಯಾದಿ ಸೌಲಭ್ಯಗಳು ನೈಜ ಕಾರ್ಮಿಕರನ್ನು ತಲುಪುತ್ತಿಲ್ಲ, ಮಂಡಳಿಯು ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡುವ ಕೆಲಸಕ್ಕಿಂತ ಖರೀದಿ ವ್ಯವಹಾರಗಳಲ್ಲೇ ಮುಳುಗಿದೆ. ನೋಂದಣಿ. ನವೀಕರಣ ಕುರಿತಾಗಿ ಪದೇ ಪದೇ ಮಾಡುವ ಬದಲಾವಣೆ ಮತ್ತು ವಿಧಿಸಲಾಗಿರುವ ನಿಯಮಗಳಿಂದಾಗಿ ಸಾವಿರಾರು ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಕಲ್ಯಾಣ ಮಂಡಳಿಯು ಮೂರು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡದಿರುವುದನ್ನು ಸಿಐಟಿಯು ಹೈಕೋರ್ಟ್‌ಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ತೀರ್ಪು ಹೊರಬಿದ್ದಿದ್ದು, ಮೂರು ವರ್ಷಗಳ ಶೈಕ್ಷಣಿಕ ಸಹಾಯಧನವನ್ನು 2021ರ ಅಧಿಸೂಚನೆಯಂತೆ ನೀಡಬೇಕೆಂದು ಹೇಳಿದೆ. ಆದರೆ ಕಲ್ಯಾಣ ಮಂಡಳಿಯು ಸಹಾಯಧನ ವಿತರಿಸಲು ಮೀನಮೇಷ ಎಣಿಸುತ್ತಿದೆ. ಕೋರ್ಟ್ ತೀರ್ಪಿನ್ನು ಗೌರವಿಸದೇ ಹಠಮಾರಿತನ ಪ್ರದರ್ಶಿಸಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 05 ರ ಬೆಳಿಗ್ಗೆಯಿಂದ ಮಾರ್ಚ್ 06 ರ ಬೆಳಿಗ್ಗೆವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅಹೋರಾತ್ರಿ ಹೋರಾಟವನ್ನು ನಡೆಸಲಿದ್ದಾರೆ ಎಂದರು.