ಮೆಲ್ಬೋರ್ನ್: ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ನಾಲ್ಕು ವಿಕೆಟ್‌ಗಳ ಜಯ ಸಿಕ್ಕಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 126 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್, 13.2 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮಿಚೆಲ್ ಮಾರ್ಷ್ 46 ರನ್ ಗಳಿಸಿ ಟಾಪ್ ಸ್ಕೋರರ್ ಆದರು. ಟ್ರಾವಿಸ್ ಹೆಡ್ (28), ಜೋಶ್ ಇಂಗ್ಲಿಸ್ (20), ಮತ್ತು ಮಿಚೆಲ್ ಓವನ್ (14) ಎರಡಂಕಿ ದಾಟಿದ ಇತರ ಆಟಗಾರರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ ಅಭಿಷೇಕ್ ಶರ್ಮಾ (37 ಎಸೆತಗಳಲ್ಲಿ 68) ಅವರ ಇನ್ನಿಂಗ್ಸ್ ಭಾರತದ ಮೊತ್ತವನ್ನು 100ರ ಗಡಿ ದಾಟಿಸಿತು. 33 ಎಸೆತಗಳಲ್ಲಿ 35 ರನ್ ಗಳಿಸಿದ ಹರ್ಷಿತ್ ರಾಣಾ ಎರಡಂಕಿ ದಾಟಿದ ಭಾರತದ ಮತ್ತೊಬ್ಬ ಆಟಗಾರ. ಆಸೀಸ್ ಪರ ಜೋಶ್ ಹ್ಯಾಝಲ್‌ವುಡ್ ಮೂರು ವಿಕೆಟ್ ಪಡೆದರು. ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನತ್ತಿ ಗೆದ್ದ ಆಸ್ಟ್ರೇಲಿಯಾ
ಭಾರತ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆಸೀಸ್‌ಗೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ಹೆಡ್-ಮಾರ್ಷ್ ಜೋಡಿ 51 ರನ್ ಸೇರಿಸಿತು. ಐದನೇ ಓವರ್‌ನಲ್ಲಿ ಹೆಡ್ ಅವರನ್ನು ಔಟ್ ಮಾಡುವ ಮೂಲಕ ವರುಣ್ ಚಕ್ರವರ್ತಿ ಭಾರತಕ್ಕೆ ಬ್ರೇಕ್ ನೀಡಿದರು. ನಂತರ ಇಂಗ್ಲಿಸ್ ಜೊತೆ 36 ರನ್ ಸೇರಿಸಿ ಮಾರ್ಷ್ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳಿದ್ದವು. ಮಾರ್ಷ್ ಔಟಾದಾಗ ಆಸೀಸ್‌ಗೆ ಗೆಲ್ಲಲು ಕೇವಲ 39 ರನ್‌ಗಳು ಬೇಕಾಗಿದ್ದವು ಮತ್ತು ಎಂಟು ವಿಕೆಟ್‌ಗಳು ಕೈಲಿದ್ದವು. ಆದರೆ, ಇದ್ದಕ್ಕಿದ್ದಂತೆ ಆಸೀಸ್ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಟಿಮ್ ಡೇವಿಡ್ (1) ಅವರನ್ನು ವರುಣ್ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಹಿಡಿದು ಔಟ್ ಮಾಡಿದರು. ಇಂಗ್ಲಿಸ್, ಕುಲ್ದೀಪ್ ಯಾದವ್ ಅವರ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು.
ಮಿಚೆಲ್ ಓವನ್ ಅವರನ್ನು ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಕೈಗೆ ಕ್ಯಾಚ್ ಕೊಡಿಸಿದರು. ಮುಂದಿನ ಎಸೆತದಲ್ಲಿ ಮ್ಯಾಥ್ಯೂ ಶಾರ್ಟ್ (0) ಅವರನ್ನು ಬುಮ್ರಾ ಯಾರ್ಕರ್ ಮೂಲಕ ಬೌಲ್ಡ್ ಮಾಡಿದರು. ಆದರೆ, 14ನೇ ಓವರ್‌ನಲ್ಲಿ ಎರಡು ರನ್ ಓಡಿ ಮಾರ್ಕಸ್ ಸ್ಟೊಯಿನಿಸ್ ಆಸೀಸ್‌ಗೆ ಜಯ ತಂದುಕೊಟ್ಟರು. ಕ್ಸೇವಿಯರ್ ಬಾರ್ಟ್ಲೆಟ್ (0) ಔಟಾಗದೆ ಉಳಿದರು. ಈ ಜಯದೊಂದಿಗೆ ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತದ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಪವರ್ ಪ್ಲೇನೊಳಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಕಂಗಲಾಗಿ ಹೋಯಿತು. ಜೋಶ್ ಹೇಜಲ್‌ವುಡ್ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ಅಭಿಷೇಕ್ ಶರ್ಮಾ ಹಾಗೂ ಹರ್ಷಿತ್ ರಾಣಾ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ಆಸ್ಟ್ರೇಲಿಯಾ ಪರ ಶಿಸ್ತು ಬದ್ದ ದಾಳಿ ನಡೆಸಿದ ಜೋಶ್ ಹೇಜಲ್‌ವುಡ್ 4 ಓವರ್‌ನಲ್ಲಿ ಕೇವಲ 13 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಲೆಟ್ ಹಾಗೂ ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರು.
Views: 14