Milk Price Hike : ಅಧಿಕಾರಿಗಳ ಮನವಿಯಂತೆ ಸರ್ಕಾರ ದರ ಏರಿಕೆ ಮಾಡಿದರೆ ಲೀಟರ್ ಹಾಲಿನ ದರ 5 ರೂಪಾಯಿಯಷ್ಟು ಹೆಚ್ಚಳವಾಗಲಿದೆ. ಹಾಲು ದರ ಏರಿಕೆಗೆ ಸಿಎಂ ಅಂಕಿತ ಒಂದೇ ಬಾಕಿ.
ಬೆಂಗಳೂರು : ಸದ್ಯದಲ್ಲೇ ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ. ಹಾಲಿನ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಮುಂದಿನ ವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ ಎನ್ನಲಾಗಿದೆ. ಅಧಿಕಾರಿಗಳ ಮನವಿಯಂತೆ ಸರ್ಕಾರ ದರ ಏರಿಕೆ ಮಾಡಿದರೆ ಲೀಟರ್ ಹಾಲಿನ ದರ 5 ರೂಪಾಯಿಯಷ್ಟು ಹೆಚ್ಚಳವಾಗಲಿದೆ. ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಎಂಎಫ್ ಪದಾಧಿಕಾರಿಗಳು ಸಮಾಲೋಚನೆ ಕೂಡಾ ನಡೆಸಿದ್ದಾರೆ. ಹಾಲು ದರ ಏರಿಕೆಗೆ ಸಿಎಂ ಅಂಕಿತ ಒಂದೇ ಬಾಕಿ.
ಹಾಲಿನ ದರ ಏರಿಕೆ ಖಚಿತ :
ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಹುತೇಕ ಖಚಿತ ಎನ್ನಲಾಗಿದೆ. ಮುಂದಿನ ವಾರದಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಹಾಲಿನ ದರ ಏರಿಕೆ ವಿಚಾರವಾಗಿ ಕೆಎಮ್ ಎಫ್ ಪದಾಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಶುಕ್ರವಾರ ಮತ್ತೆ ಕೆಎಮ್ ಎಫ್ ಪದಾಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ದರ ಏರಿಕೆ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.
ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ :
ಇನ್ನು ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ದರ ಹೆಚ್ಚಿಸುವಂತೆ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ 5 ರೂಪಾಯಿಯಲ್ಲಿ ರೈತರಿಗೆ 3 ರೂಪಾಯಿ ಪ್ರೋತ್ಸಾಹ ದನ ಹಾಗೂ ಸಂಸ್ಕರಣ ವೆಚ್ಚ 2 ರೂಪಾಯಿ ಎಂದು ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಪ್ರತಿ ಲೀಟರ್ ಹಾಲಿಗೆ 2 ರಿಂದ ಮೂರು ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಹೆಚ್ಚು. ಅಂದರೆ ಲೀಟರ್ ಹಾಲಿಗೆ 2 ರಿಂದ 3 ರೂಪಾಯಿಯಷ್ಟು ದರ ಏರಿಕೆ ಪಕ್ಕಾ ಎನ್ನಲಾಗುತ್ತಿದೆ.
ಹಾಲಿನ ದರ ಏರಿಕೆ ಅನಿವಾರ್ಯ :
ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡುತ್ತಿರುವ ದರಕ್ಕಿಂತ ಖಾಸಗಿ ವ್ಯಕ್ತಿಗಳು ಅಧಿಕ ದರ ನೀಡುತ್ತಿದ್ದಾರೆ. ಹಾಗಾಗಿ ರೈತರು ಖಾಸಗಿ ಹಾಲು ಮಾರಟದಾರರಿಗೆ ಹಾಲನ್ನು ನೀಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಹಾಲಿನ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ. ಅಲ್ಲದೆ ಪಶು ಸಂಗೋಪನೆ ವೆಚ್ಚ ಹೆಚ್ಚಳವಾಗಿದೆ.
ರೈತರು ಹಾಲು ಉತ್ಪಾದಕ ಸಂಘಗಳು ಕಷ್ಟದಲ್ಲಿವೆ. ಹಾಗಾಗಿ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯ ಎನ್ನುವುದು ಕೆಎಂಎಫ್ ಪದಾಧಿಕಾರಿಗಳ ವಾದ .
ಮತ್ತೊಂದೆಡೆ, ತರಕಾರಿ ಬೆಲೆ ಕೂಡಾ ಗಗನಕ್ಕೆರಿದು ಇದರ ಬೆಲೆ ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಿಗಳಿಗೂ ತಟ್ಟಿದೆ. ಟೋಮಟೊ, ಬೀನ್ಸ, ಕ್ಯಾರೆಟ್, ಶುಂಟಿ ಹಲವರು ತರಕಾರಿಗಳ ಬೆಲೆ ತೀವ್ರವಾಗಿ ಹೆಚ್ಚಳವಾಗಿದ್ದು, ಜನ ಸಾಮಾನ್ಯರು ತರಕಾರಿ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ವ್ಯಾಪರ ಡಲ್ ಇರುವುದರಿಂದ ಅಂಗಡಿ ಬಾಡಿಗೆ ಕಟ್ಟಲು ವ್ಯಾಪಾರಿಗಳು ಪರದಾಡುವಂತಾಗಿದೆ.