ಚಿತ್ರದುರ್ಗ:
ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ ಮೆರವಣಿಗೆ ವೇಳೆ ಸಂಭವಿಸಬಹುದಾದ ವಿಪತ್ತುಗಳನ್ನು ಎದುರಿಸಲು ಚಿತ್ರದುರ್ಗದಲ್ಲಿ ಭದ್ರತಾ ಇಲಾಖೆಗಳು, ಸ್ವಯಂಸೇವಕರು ಹಾಗೂ ವೈದ್ಯಕೀಯ ಸಿಬ್ಬಂದಿ ಸಮನ್ವಯದೊಂದಿಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ಅಣಕು ಪ್ರದರ್ಶನದ ವೇಳೆ ಮಾತನಾಡಿ, “ಈ ಬಾರಿಯ ಶೋಭಾಯಾತ್ರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಅತಿಯಾದ ಜನಸಂದಣಿ ವೇಳೆ ನೂಕುನುಗ್ಗಲು, ಕಾಲ್ತುಳಿತ, ಅಗ್ನಿ ಅವಘಡ, ವಿದ್ಯುತ್ ದುರಂತ ಹಾಗೂ ತುರ್ತು ವೈದ್ಯಕೀಯ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ತಕ್ಷಣ ಸ್ಪಂದಿಸುವಂತೆ ಸಿದ್ಧರಾಗಿರಬೇಕು,” ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ಅವರು, “ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಹಾಗೂ ವೇದಾಂತ ಆಸ್ಪತ್ರೆಗಳಲ್ಲಿ ಒಟ್ಟು 200 ಹಾಸಿಗೆಗಳನ್ನು ತುರ್ತು ಸಂದರ್ಭಕ್ಕೆ ಮೀಸಲಿಡಲಾಗಿದೆ. 10 ಸರ್ಕಾರಿ ಹಾಗೂ 10 ಖಾಸಗಿ ಆಂಬುಲೆನ್ಸ್‌ಗಳನ್ನು ಸಿದ್ಧಗೊಳಿಸಲಾಗಿದೆ. ತಜ್ಞ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ,” ಎಂದು ತಿಳಿಸಿದರು.
ನಗರಸಭೆ ಎಂಜಿನಿಯರ್ ರಾಜು ಅವರು, “ಶೋಭಾಯಾತ್ರೆ ದಿನ ನಗರ ಸಂಪರ್ಕಿಸುವ 6 ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳು ನಿರ್ಮಿಸಲಾಗುವುದು. ಮೆರವಣಿಗೆಯ ಮಾರ್ಗದಲ್ಲಿ 18 ವಾಚ್ ಟವರ್‌ಗಳು, 161 ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆ ಹಾಗೂ 20 ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸುವ ಮೂಲಕ ಕಣ್ಗಾವಲು ಇರಿಸಲಾಗುವುದು,” ಎಂದು ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ ಮತ್ತು ಸ್ವಯಂಸೇವಕರು ಜನಸಂದಣಿಯಲ್ಲಿ ವಿಪತ್ತಿಗೆ ತುತ್ತಾದವರನ್ನು ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಸಾಗಿಸುವ ಅಭ್ಯಾಸವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಡಿವೈಎಸ್‌ಪಿ ಶ್ರೀನಿವಾಸ್, ದಿನಕರ್, ಡಿಡಿಪಿಐ ಎಂ.ಆರ್. ಮಂಜುನಾಥ, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ ಉಪಸ್ಥಿತರಿದ್ದರು.