Teacher’s Day: ಕಳೆದ ಹದಿನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಜೊತೆಗೆ ಬಿ.ಇಡಿ ನಲ್ಲಿ ಗೋಲ್ಡ್ ಮೆಡಲ್ ಪಡೆದ ಈ ಮಾದರಿ ಶಿಕ್ಷಕಿ ಇತರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ.

Teacher’s Day: ಆ ಶಾಲೆಯ ಶಿಕ್ಷಕಿ ಅಂದ್ರೆ ಮಕ್ಕಳಿಗೆಲ್ಲಾ ಅಚ್ಚುಮೆಚ್ಚು. ಕಳೆದ ಹದಿನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ಸಾಧನೆ ಅನನ್ಯ. ಇಬ್ಬರು ಮಕ್ಕಳ ತಾಯಿಯಾಗಿರುವ ಶಿಕ್ಷಕಿ ಬಿ.ಇಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನ ಪಡೆದು ಚಿನ್ನದ ಪದಕ ಪಡೆಯುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಈವೊಂದು ಶಿಕ್ಷಕಿಯ ಸಾಧನೆ ಇತರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಷ್ಟಕ್ಕೂ ಆ ಮಾದರಿ ಶಿಕ್ಷಕಿಯಾದ್ರು ಯಾರು ಅಂತೀರಾ ಇಲ್ಲಿದೆ ಅದರ ಕಂಪ್ಲೀಟ್ ರಿಪೋರ್ಟ್…
ಅಂದಹಾಗೆ, ನಮ್ಮ ಕಥಾನಾಯಕಿಯ ಹೆಸರು ಎಮ್.ಎಲ್ ಪವಿತ್ರ. ಇವರು ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡತನದ ಕುಟುಂಬದಲ್ಲಿ ಜನಿಸಿದ ಪವಿತ್ರರವರು ಸರ್ಕಾರಿ ಶಿಕ್ಷಕಿಯಾಗಿ ಕಳೆದ ಹದಿನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಪತಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದು ಇಬ್ಬರು ಮಕ್ಕಳಿರುವ ಶಿಕ್ಷಕಿ ಪವಿತ್ರ ಮತ್ತಷ್ಟು ಓದಬೇಕು ಎನ್ನುವ ಛಲದಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಚಿನ್ನದ ಪದಕವನ್ನ ಸ್ವೀಕರಿಸಿದ್ದಾರೆ. ಇನ್ನೂ ಶಿಕ್ಷಕಿ ಪವಿತ್ರ ಈಗ ಹೆಬ್ಬಗೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಬೋಧನೆ ಜೊತೆಗೆ ಮಕ್ಕಳೊಂದಿಗೆ ಬೆರೆತು ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಮಕ್ಕಳ ಪ್ರೀತಿಗೆ ಪವಿತ್ರ ಪಾತ್ರರಾಗಿದ್ದಾರೆ. ಸದಾ ಓದಿನಲ್ಲೇ ತಮ್ಮ ಹೆಚ್ಚು ಸಮಯ ಕಳೆಯುವ ಪವಿತ್ರರವರು ತಮ್ಮ ವಿದ್ಯಾರ್ಥಿಗಳಿಗೂ ಓದುವ ಹವ್ಯಾಸವನ್ನು ತುಂಬಿದ್ದು, ಮಾದರಿ ಶಿಕ್ಷಕಿ ಎನಿಸಿಕೊಂಡಿದ್ದಾರೆ.
ಇನ್ನೂ ಗುರು ಬ್ರಹ್ಮ, ಗುರು ವಿಷ್ಣು ಗುರುದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ. ತಸ್ಮೈ ಶ್ರೀ ಗುರುವೇ ನಮಃ. ಎಂಬಂತೆ ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಉನ್ನತ ಸ್ಥಾನ ನೀಡಲಾಗುತ್ತೆ. ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುವ ಗುರುಗಳನ್ನು ಗೌರವದಿಂದ ಕಾಣುತ್ತಾರೆ. ಅದೇ ರೀತಿ ಹೆಬ್ಬಗೋಡಿ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಶಿಕ್ಷಕಿ ಪವಿತ್ರ ಎಂದರೆ ಪ್ರೀತಿ ಪೂರ್ವಕವಾಗಿ ಕಾಣುತ್ತಾರೆ. ಶಿಕ್ಷಕಿ ಪವಿತ್ರರವರು ಸಹ ಎಲ್ಲಾ ಮಕ್ಕಳನ್ನ ಒಂದೇ ರೀತಿ ಕಾಣುತ್ತ ಅವರೊಟ್ಟಿಗೆ ಒಳ್ಳೆಯ ಭಾಂದವ್ಯವನ್ನ ಹೊಂದಿದ್ದಾರೆ. ಮಕ್ಕಳಿಗೆ ಕಲಿಕಾ ಪೂರಕವಾಗಿ ವಿಷಯವನ್ನ ಅರ್ಥ ಮಾಡಿಸಿ ಅವರಿಗೆ ಶಿಸ್ತಿನ ಪಾಠ ಹೇಳಿಕೊಡುತ್ತಿದ್ದಾರೆ. ಶಿಕ್ಷಕಿ ಪವಿತ್ರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ತಾವು ಓದಿ ಬಿ.ಇಡ್ ನಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಗೋಲ್ಡ್ ಮೆಡಲ್ ಪಡೆದಿರೋದು ವಿದ್ಯಾರ್ಥಿಗಳಲ್ಲೂ ಸ್ಪೂರ್ತಿದಾಯವಾಗಿದೆ. ಇನ್ನೂ ಈ ಹಿಂದೆ ಇವರ ವಿದ್ಯಾರ್ಥಿಗಳಾಗಿದ್ದ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರೆ. ವಿದ್ಯಾರ್ಥಿಗಳಿಗ ಖಾಸಗಿ ಶಾಲೆಗೂ ಮೀರಿ ಮಾದರಿ ಶಿಕ್ಷಣ ನೀಡುತ್ತಿದ್ದು, ಶಿಕ್ಷಕಿ ಪವಿತ್ರರವರ ಸಾಧನೆ ಇತರೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದೆ.
ಒಟ್ಟಾರೆ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನ ಪ್ರತಿಭಾನ್ವಿತರನ್ನಾಗಿ ಮಾಡಬೇಕೇನ್ನುವ ಮಹದಾಸೆ ಹೊಂದಿರುವ ಶಿಕ್ಷಕಿ ಪವಿತ್ರರವರ ಈವೊಂದು ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಶಿಕ್ಷಕರು ಎಲ್ಲಾ ಶಾಲೆಗಳಲ್ಲೂ ಇದ್ದಲ್ಲಿ ಸರ್ಕಾರಿ ಶಾಲೆಗಳು ಉಳಿಯುವುದರೊಂದಿಗೆ ಅಭಿವೃದ್ಧಿ ಆಗುವುದು ಸತ್ಯ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii