ವಿಶ್ವಸಂಸ್ಥೆಯಲ್ಲಿ ಮೋದಿ ಯೋಗ ದಿನಾಚರಣೆ.. ವಿಶ್ವಾದ್ಯಂತ ಅತ್ಯುತ್ಸಾಹ.. ಆಚರಣೆಗೆ ಕ್ಷಣಗಣನೆ!

ವೀಶ್ವಸಂಸ್ಥೆ ಕಚೇರಿಯ ಲ್ಯಾನ್​ನಲ್ಲಿ ನಾಳೆ ವಿಶ್ವಯೋಗ ದಿನಾಚರಣೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ವಿಶ್ವಸಂಸ್ಥೆ ಕಚೇರಿಯಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ವಿಶ್ವಸಂಸ್ಥೆ(ನ್ಯೂಯಾರ್ಕ್​): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.

ಈ ಕಾರ್ಯಕ್ರಮದ ಬಗ್ಗೆ ವಿಶ್ವದಾದ್ಯಂತ ರಾಜತಾಂತ್ರಿಕರು ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ತೀರಾ ಉತ್ಸಾಹದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಕ್ಯಾಂಪಸ್‌ನ ಉತ್ತರ ಲಾನ್‌ನಲ್ಲಿ ಸೋಮವಾರ ಸಂಭ್ರಮದ ವಾತಾವರಣ ಇತ್ತು. ಸುಮಾರು 1,800 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕಾಂಬೋಜ್ ಮಾಹಿತಿ ನೀಡಿದ್ದಾರೆ. ಮೋದಿ ಅವರು ಯೋಗಾ ದಿನದಂದೇ ಅಮೆರಿಕ ಪ್ರವಾಸ ಆರಂಭಿಸಲಿದ್ದು,ನಂತರ ವಾಷಿಂಗ್ಟನ್​ಗೆ ತೆರಳಲಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳುವ ಪ್ರಕಾರ, ನ್ಯೂಯಾರ್ಕ್‌ನಲ್ಲಿ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಮೆರಿಕಕ್ಕೆ ಮೋದಿ ಅವರ 8ನೇ ಭೇಟಿ ಇದಾಗಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. 21 ಗನ್​​​ಗಳ ವಿಶಾಲ ತೋಪುಗಳ ಮೂಲಕ ಅಮೆರಿಕ ಮೋದಿ ಅವರಿಗೆ ಸ್ವಾಗತ ಕೋರಲಿದೆ. ಇನ್ನು ಪ್ರಧಾನಿ ಮೋದಿ ಎರಡನೇ ಬಾರಿಗೆ ಅಮೆರಿಕ ಸಂಸತ್​ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.

“ವಸುಧೈವ ಕುಟುಂಬಕಂ” ಅಥವಾ “ಒಂದು ವಿಶ್ವ – ಒಂದು ಕುಟುಂಬ – ಎಲ್ಲರ ಕಲ್ಯಾಣಕ್ಕಾಗಿ ಯೋಗ” ಎಂಬುದು ಈ ವರ್ಷದ ವಿಶ್ವಯೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ. ಪ್ರಧಾನಿ ಮೋದಿ ಅವರೇ ವೈಯಕ್ತಿಕವಾಗಿ ವಿಶ್ವ ಯೋಗದಿನದ ಆಚರಣೆಯನ್ನು ಮುನ್ನಡೆಸುತ್ತಿರುವುದು ಕಾರ್ಯಕ್ರಮದ ಆಸಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿಕಾ ಕಾಂಬೋಜ್ ಹೇಳಿದರು.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷೆ ಮತ್ತು ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಅವರು ಯೋಗ ಸಮಾರಂಭದಲ್ಲಿ ಮೋದಿ ಅವರೊಂದಿಗೆ ಭಾಗವಹಿಸಲಿದ್ದು, ಅವರೊಂದಿಗಿನ ಉಪಸ್ಥಿತಿಯನ್ನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಅಂದು ಇರಲ್ಲ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರಸ್​: ವಿಶ್ವಸಂಸ್ಥೆ ಸೆಕ್ರೆಟರಿ – ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹೊಸ ಜಾಗತಿಕ ಹಣಕಾಸು ಒಪ್ಪಂದದ ಶೃಂಗಸಭೆಗಾಗಿ ಪ್ಯಾರಿಸ್‌ನಲ್ಲಿ ಇರಲಿದ್ದಾರೆ. ಹೀಗಾಗಿ ಅವರು ವಿಶ್ವಯೋಗ ದಿನದಲ್ಲಿ ಭಾಗವಹಿಸುತ್ತಿಲ್ಲ. ಆದರೆ ಜಾಗತಿಕ ಯೋಗ ದಿನಾಚರಣೆ ನಿಮಿತ್ತ ಅವರು ವಿಡಿಯೋ ಸಂದೇಶವನ್ನು ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಾಮೂಹಿಕ ಯೋಗಾಸನಗಳ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನವು ಬುಧವಾರ ನ್ಯೂಯಾರ್ಕ್ ನಲ್ಲಿ ಬೆಳಗ್ಗೆ 8 ರಿಂದ 9 ರವರೆಗೆ ಅಂದರೆ ಭಾರತೀಯ ಕಾಲಮಾನ ಸಂಜೆ 5:30 ರಿಂದ 6:30 ವರೆಗೆ ನಡೆಯಲಿದೆ. ಯೋಗ ದಿನದ ನೇರ ಪ್ರಸಾರ ಯುಎನ್ ನೆಟ್‌ವರ್ಕ್‌ – webtv. un.org ನಲ್ಲಿ ಸಿಗಲಿದೆ.

ಇನ್ನೊಂದೆಡೆ, ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಯೋಗ ಆಚರಣೆಯಲ್ಲಿ ಮೋದಿ ಭಾಗವಹಿಸುವುದಿಲ್ಲ. ಕಾನ್ಸುಲೇಟ್, ನಾಗರಿಕ ಗುಂಪುಗಳು ಮತ್ತು ಯೋಗ ಸಂಸ್ಥೆಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ವಾರ್ಷಿಕ ಕಾರ್ಯಕ್ರಮಕ್ಕೆ “ಮೈಂಡ್ ಓವರ್ ಮ್ಯಾಡ್ನೆಸ್ ಯೋಗ” ಎಂದು ಕರೆಯಲಾಗುತ್ತದೆ.

2014 ರಲ್ಲಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯನ್ನುದ್ದೇಶಿಸಿ ಮೋದಿ ಭಾಷಣ ಮಾಡಿದ್ದರು. ಅಂದು ಪ್ರಧಾನಿ ಮೋದಿ ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಸುದೀರ್ಘ ದಿನವಾಗಿರುತ್ತದೆ. ಈ ವಿಶೇಷ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದರು. ಮೋದಿ ಅವರ ಈ ಸಲಹೆಯನ್ನು ಒಪ್ಪಿದ್ದ ವಿಶ್ವಸಂಸ್ಥೆ ಜೂನ್​ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಣೆ ಮಾಡಿತ್ತು.

ಇದಾದ ಬಳಿಕ ಮೊದಲ ಯೋಗ ದಿನವನ್ನು 2015 ರಲ್ಲಿ ಆಚರಿಸಲಾಯಿತು. 2020 ಮತ್ತು 2021 ರಲ್ಲಿ ಕೋವಿಡ್ -19 ರ ನಡುವೆಯೂ ವರ್ಚುಯಲ್ ಆಗಿ ಪ್ರತಿ ವರ್ಷವೂ ಯೋಗ ದಿನ ಆಚರಿಸಲ್ಪಟ್ಟಿದೆ.

Source : https://m.dailyhunt.in/news/india/kannada/etvbhar9348944527258

Leave a Reply

Your email address will not be published. Required fields are marked *