
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಜ.27: ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘದವರು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮದ 18ನೇ ಕಾರ್ಯಕ್ರಮವು ಇದೇ ತಿಂಗಳ 26ರ ಭಾನುವಾರ ಸಂಜೆ ಇಲ್ಲಿನ ನಗರದ ಜೆ ಸಿ ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಿತು .
ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಉದ್ಯೋಗ ಪರ್ವದ “ಕರ್ಣಭೇದನ ಅಥವಾ ಕೌರವೇಂದ್ರನ ಕೊಂದೆ ನೀನು” ಕಥಾ ಪ್ರಸಂಗವನ್ನು ಚಿತ್ರದುರ್ಗದ ಗಮಕಿ ಮೀನಾಕ್ಷಿ ಭಟ್ ಅವರು ಗಮಕ ಕಲೆಯ ವಿವಿಧ ಮಟ್ಟುಗಳನ್ನು ತುಂಬಾ ಪರಿಣಾಮಕಾರಿಯಾಗಿ ಪ್ರಯೋಗಿಸುತ್ತ, ವಿವಿಧ ರಾಗಗಳ ಬಳಕೆಯೊಂದಿಗೆ ವಾಚನ ಮಾಡಿದರು. ಗಮಕ ವಿದ್ವಾನ್,ಡಾ. ರಾಜೀವಲೋಚನ ಅವರು ತಮ್ಮ ವಿದ್ವತ್ಪೂರ್ಣ ವ್ಯಾಖ್ಯಾನದ ಮೂಲಕ ಯಾವ ರೀತಿಯಲ್ಲಿ ಶ್ರೀ ಕೃಷ್ಣನು ತನ್ನ ರಾಜಕಾರಣ ಚಾತುರ್ಯದಿಂದ ದುರ್ಬಲವಾದ ಪಾಂಡವ ಪಕ್ಷವನ್ನು ಜಯದ ಮೆಟ್ಟಿಲನ್ನು ಹತ್ತಿಸಿದ ಎಂಬುದನ್ನು ವರ್ಣಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಆರ್ಯವೈಶ್ಯ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎನ್. ಕಾಶಿವಿಶ್ವನಾಥ ಶೆಟ್ಟಿ
ಮಾತನಾಡಿ ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭ ಎನಿಸಿರುವ ರಾಮಾಯಣ ಮಹಾಭಾರತಗಳಂತ ವಿಶ್ವಮಾನ್ಯ ಕೃತಿಗಳ
ಸಾರ ಸರ್ವಸ್ವವನ್ನು ವಾಚನ ಗಾಯನಗಳ ಮೂಲಕ ಜನತೆಗೆ ಮುಟ್ಟಿಸುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿರುವ ಗಮಕ
ಕಲಾಭಿಮಾನಿಗಳ ಸಂಘದಂತಹ ಸಂಸ್ಥೆಗಳಿಗೆ ಸರ್ವರ ಪ್ರೋತ್ಸಾಹ ಅತ್ಯಗತ್ಯ ಎಂದರು.
ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷಣಿ ಕೆ. ಆರ್ .ರಮಾದೇವಿ ವೆಂಕಣ್ಣಾಚಾರ್ ಮಾತನಾಡಿ ನಮ್ಮ ಪ್ರಾಚೀನ ಕಲೆಗಳು
ವಿದೇಶಗಳಲ್ಲಿ ವಿಜೃಂಭಿಸುತ್ತಿವೆ ಎಂದು ಡಂಗೂರ ಸಾರೋದಕ್ಕೆ ಬದಲಾಗಿ ,ಇಂತಹ ಅಮೂಲ್ಯ ಕಲೆಗಳನ್ನು ನಮ್ಮ ದೇಶಗಳಲ್ಲಿ
ಹೆಚ್ಚೆಚ್ಚು ಪ್ರಚಾರ ಮಾಡುವುದು ,ಜನರು ಅದನ್ನು ಕೇಳುವ ಸಂಸ್ಕೃತಿಯನ್ನು ಬೆಳಸಿಕೊಳ್ಳುವಂತೆ ಮಾಡುವುದು ಬಹು ಮುಖ್ಯ
ಎಂದೆನಿಸುತ್ತದೆ ಎಂದು ಹೇಳಿದರು.
ಮಾರುತಿ ಭಜನಾ ಮಂಡಳಿಯ ಸದಸ್ಯ ಸುಮಾ ಜೀವನ್ ಪ್ರಾರ್ಥಿಸಿದರೆ, ಶಶಿಧರ್ ಶ್ಯಾನುಭೋಗ್ ಸ್ವಾಗತಿಸಿ,ವಂದಿಸಿದರು.ಶ್ರೀ
ಹರಿವಾಯು ಗುರು ಸೇವಾ ಸಂಘದ ಅಧ್ಯಕ್ಷ ಟಿ. ಕೆ. ನಾಗರಾಜ ಅವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು.
ಮುಂದಿನ ಮಾಸಿಕ ಗಮಕ ಕಾರ್ಯಕ್ರಮವು ನಗರದ ಜೆಸಿಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ 23-2-2025ರ
ಭಾನುವಾರ ಸಂಜೆ ಆರು ಗಂಟೆಗೆ ನಡೆಯಲಿದ್ದು,ಅಂದು ಶಂಕರಾಚಾರ್ಯರ ಬಾಲ್ಯ ಕುರಿತಾದ ರೂಪಕವನ್ನು ಸ್ಥಳೀಯ ಶಾರದ
ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
Views: 0