New GST Rates: ಜಿಎಸ್​ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಸೆಪ್ಟೆಂಬರ್ 4: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕ್ರಾಂತಿಯ ಬಗ್ಗೆ ಮಾತನಾಡಿದ್ದರು. ಹಲವು ವಸ್ತುಗಳ ಜಿಎಸ್‌ಟಿ (GST) ದರ ಇಳಿಸುವ ಮೂಲಕ ದೇಶದ ಜನರಿಗೆ ದೀಪಾವಳಿ ಉಡುಗೊರೆ ಕೊಡುವುದಾಗಿ ತಿಳಿಸಿದ್ದರು.

ಸರ್ಕಾರ ಈಗ ನುಡಿದಂತೆ ನಡೆದಿದ್ದು, ಜಿಎಸ್​ಟಿ ಪರಿಷ್ಕರಣೆ (GST Revision) ಮಾಡಿ ದೇಶವಾಸಿಗಳಿಗೆ ದೊಡ್ಡ ಉಡುಗೊರೆ ಘೋಷಿಸಿದೆ. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.

ಮತ್ತೊಂದೆಡೆ, ಕೆಲವು ವಸ್ತುಗಳಿಗೆ ಜಿಎಸ್​ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಂದರೆ, ಶೂನ್ಯ ತೆರಿಗೆ ಅಡಿ ತರಲಾಗಿದೆ. ಹೀಗಾಗಿ ಆ ವಸ್ತುಗಳಿಗೆ ತೆರಿಗೆ ಪಾವತಿಸುವ ಅಗತ್ಯವೇ ಇರುವುದಿಲ್ಲ. ಅಂಥ ವಸ್ತುಗಳು ಯಾವುವು ಎಂಬ ವಿವರ ಇಲ್ಲಿದೆ.

ಯಾವೆಲ್ಲ ವಸ್ತುಗಳಿಗೆ ತೆರಿಗೆ ಇಲ್ಲ?

ಯುಎಚ್​ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಇವಗಳು ಈವರೆಗೆ ಶೇ 5 ರ ಜಿಎಸ್​ಟಿ ಸ್ಲ್ಯಾಬ್​​ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಕಲಿಕಾ ಸಾಮಾಗ್ರಿಗಳಿಗೂ ತೆರಿಗೆ ವಿನಾಯಿತಿ

ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾಸಾಮಗ್ರಿಗಳ ಮೇವಿನ ಜಿಎಸ್‌ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್‌ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇವುಗಳ ಮೇಲೆ ಮೊದಲು ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದನ್ನು ಸಂಪೂರ್ಣ ತೆರವು ಮಾಡಲಾಗಿದ್ದು, ಇನ್ಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ.

ವೈಯಕ್ತಿಕ, ಆರೋಗ್ಯ ವಿಮೆಗೂ ಇಲ್ಲ ತೆರಿಗೆ

ವೈಯಕ್ತಿಕ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಶೇ 18ರ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯ ವಿಮೆಗೆ ಕೇಂದ್ರಸರ್ಕಾರ ಬಹುದೊಡ್ಡ ರಿಯಾಯಿತಿ ನೀಡಿದೆ.

ಯಾವೆಲ್ಲ ವಸ್ತುಗಳ ತೆರಿಗೆ ಇಳಿಕೆ?

ಜಿಎಸ್​ಟಿ ದರ ಪರಿಷ್ಕರಣೆಯಿಂದ ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಿದೆ ಎಂಬ ವಿವರವಾದ ಮಾಹಿತಿಗೆ ಈ ಲಿಂಕ್ ನೀಡಿರುವ ಲಿಂಕ್ ಕ್ಲಿಕ್ ಮಾಡಿ.

ಐಷಾರಾಮಿ ವಸ್ತುಗಳ ಮೇಲೆ ಭಾರಿ ತೆರಿಗೆ

ಮಧ್ಯಮ ವರ್ಗ, ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್​ಟಿ ಪರಿಷ್ಕರಣೆ ಮಾಡಿದ್ದೇನೋ ನಿಜ. ಆದರೆ, ಕೆಲ ಐಷಾರಾಮಿ ವಸ್ತುಗಳ ಮೇಲೆ ಭಾರಿ ತೆರಿಗೆ ವಿಧಿಸುವ ಮೂಲಕ ತೆರಿಗೆ ಸಂಗ್ರಹಕ್ಕೂ ಸರ್ಕಾರ ಚಿಂತನೆ ಮಾಡಿದೆ. ಈವರೆಗೆ ಶೇಕಡಾ 28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇ 40 ರ ಜಿಎಸ್​ಟಿ ಪಾವತಿಸಬೇಕಾಗಲಿದೆ.

ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು, ಜಗಿಯುವ ವಸ್ತುಗಳು ಇನ್ಮುಂದೆ 40 ಪರ್ಸೆಂಟ್ ಜಿಎಸ್​ಟಿ ಅಡಿಯಲ್ಲಿ ಬರುತ್ತವೆ. ಅಧಿಕ ಸಕ್ಕರೆ ಅಂಶ ಇರುವ ಪಾನೀಯಗಳು, ಸೋಡಾ, ಕೂಲ್ ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನಿಯಗಳು, ಕೆಫೀನ್ ಹೊಂದಿರುವ ಪಾನಿಯಗಳ ಮೇಲೆ ಶೇ 40ರಷ್ಟು ತೆರಿಗೆ ಬೀಳಲಿದೆ. ಪ್ಲೈಟ್, ಹೆಲಿಕಾಪ್ಟರ್, ಐಷಾರಾಮಿ ಕಾರುಗಳು, 1500 ಸಿಸಿಗಿಂತ ಹೆಚ್ಚು, 4,000 ಮಿ.ಮೀ ಉದ್ದವಿರುವ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್​ಗಳ ದರಗಳು ಇನ್ನಷ್ಟು ದುಬಾರಿಯಾಗಲಿವೆ. ಖಾಸಗಿ ವಿಮಾನ, ಹೆಲಿಕಾಪ್ಟರ್ ಬಳಕೆ, ಮನರಂಜನೆಗೆ ದೋಣಿ, ಇತರ ಹಡಗುಗಳ ಬಳಕೆ, ಹೆಚ್ಚು ಸಾಮರ್ಥ್ಯದ ರಿವಾಲ್ವಾರ್, ಪಿಸ್ತೂಲ್​ಗಳ ಮೇಲೆ ಶೇ 40 ರ ಸ್ಲ್ಯಾಬ್ ಇರಲಿದೆ.

Views: 52

Leave a Reply

Your email address will not be published. Required fields are marked *